ಬೆಂಗಳೂರು: ವೇಗವಾಗಿ ಬೆಳೆಯುತ್ತಿರುವ ಕೃತಕ ಬುದ್ಧಿಮತ್ತೆ ಕ್ಷೇತ್ರದ ವಿಫುಲ ಅವಕಾಶವನ್ನು ಬಳಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ನೇ ಸಾಲಿನ ಬಜೆಟ್‌ನಲ್ಲಿ ಹಲವು ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿರುವ ಎಐ ಮತ್ತು ರೊಬೊಟಿಕ್ಸ್ ತಂತ್ರಜ್ಞಾನ ಪಾರ್ಕ್ ಪ್ರತಿಷ್ಠಾನ ಹಾಗೂ ಇಸ್ರೋ ಮತ್ತು ಕಿಯೋನಿಕ್ಸ್ ಸಹಯೋಗದಲ್ಲಿ ಬೆಂಗಳೂರು ರೋಬೋಟಿಕ್ಸ್ ಮತ್ತು Al ಇನ್ನೊವೇಶನ್ ರೋನ್ ಎಂಬ ರೋಬೋಟಿಕ್ಸ್ ಮತ್ತು Al ಕ್ಯಾಂಪಸ್ ಸ್ಥಾಪಿಸುವ ಘೋಷಣೆಯನ್ನು ಮಾಡಿದ್ದು, ಐಐಐಟಿ ರಾಯಚೂರಿನಲ್ಲಿ ಕೃತಕ ಬುದ್ಧಿಮತ್ತೆ ಶ್ರೇಷ್ಠತಾ ಕೇಂದ್ರವನ್ನು ₹5 ಕೋಟಿ ವೆಚ್ಚದಲ್ಲಿ ಸ್ಥಾಪನೆಯ ಪ್ರಸ್ತಾವನೆಯನ್ನೂ ಅವರು ಮಂಡಿಸಿದ್ದಾರೆ.
ಮುಂದುವರೆದು, ಜಾಗತಿಕ ಸಾಮರ್ಥ್ಯ ಕೇಂದ್ರ ನೀತಿಯ ಅಡಿಯಲ್ಲಿ ಈಗಾಗಲೇ 550ಕ್ಕೂ ಹೆಚ್ಚು ಜಿಸಿಸಿಗಳಿದ್ದು, 2029ರಲ್ಲಿ ರಾಜ್ಯದಲ್ಲಿ ಇನ್ನೂ 500 ಜಿಸಿಸಿಗಳ ಸ್ಥಾಪನೆಯ ಗುರಿ ಹೊಂದಲಾಗಿದೆ. ಇದರಿಂದ 3.5 ಲಕ್ಷ ಉದ್ಯೋಗ ಮತ್ತು 50 ಶತಕೋಟಿ ಡಾಲರ್ ಆರ್ಥಿಕ ಉತ್ಪಾದನೆ ಸಾಧ್ಯ. ಇದಕ್ಕಾಗಿ ಕಿಯೋನಿಕ್ಸ್ ಮೂಲಕ ಮಂಗಳೂರಿನಲ್ಲಿ ಐಟಿ ಪಾರ್ಕ್ ಅನ್ನು ಅಭಿವೃದ್ಧಿಗೊಳಿಸಿ ಜಿಸಿಸಿಯನ್ನು ಪ್ರೋತ್ಸಾಹಿಸಲಾಗುವುದು ಎಂದಿದ್ದಾರೆ.
ಮೈಸೂರಿನಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡಿದ ಪರಿಣಾಮ 100 ಕಂಪನಿಗಳಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದು, ಬೆಂಗಳೂರಿನ ದಟ್ಟಣೆಯನ್ನು ಕಡಿಮೆ ಮಾಡಲು ಹಾಗೂ ವಿಕೇಂದ್ರೀಕೃತ ಆರ್ಥಿಕತೆಯನ್ನು ಪ್ರೋತ್ಸಾಹಿಸಲು ಮೈಸೂರು ನಗರವನ್ನು ರಾಜ್ಯದ ಎರಡನೇ ಐಟಿ ಸಿಟಿಯನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಬಜೆಟ್‌ನಲ್ಲಿ ಹೇಳಿದ್ದಾರೆ.
ಇನ್ನೂ ಬೆಂಗಳೂರಿನಲ್ಲಿ ಅತ್ಯಾಧುನಿಕ ಕೃತಕ ಬುದ್ಧಿಮತ್ತೆ ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸುವ ಉದ್ದೇಶದಿಂದ ಬಯೋಇನ್‌ಫಾರ್ಮ್ಯಾಟಿಕ್ಸ್ ಮತ್ತು ಅನ್ವಯಿಕ ಜೈವಿಕತಂತ್ರಜ್ಞಾನ ಸಂಸ್ಥೆ, ಸೆಂಟರ್ ಫಾರ್ ಸೆಲ್ಯುಲಾರ್ ಅಂಡ್ ಮಾಲೆಕ್ಯುಲಾರ್ ಪ್ಲಾಟ್‌ಫಾರ್ಮ್ ಹಾಗೂ ನ್ಯಾಸ್‌ಕಾಂ ಸಂಸ್ಥೆಯ ಸಹಭಾಗಿತ್ವದಲ್ಲಿ ಒಟ್ಟು ₹16 ಕೋಟಿ ವೆಚ್ಚದಲ್ಲಿ ಎರಡು ಉತ್ಕೃಷ್ಟತಾ ಕೇಂದ್ರಗಳ ಸ್ಥಾಪನೆ
ಮುಂದಿನ ಐದು ವರ್ಷಗಳಲ್ಲಿ ಕ್ಯಾಂಟಂ ಕ್ಷೇತ್ರದಲ್ಲಿ ಅವಶ್ಯವಿರುವ ಉತ್ಕೃಷ್ಟ ಮಾನವ ಸಂಪನ್ಮೂಲವನ್ನು ಪೂರೈಸಲು ಸಂಶೋಧಕರು ಹಾಗೂ ತಂತ್ರಜ್ಞರನ್ನು ಸಿದ್ದಪಡಿಸುವ ನಿಟ್ಟಿನಲ್ಲಿ ಕರ್ನಾಟಕ ಕ್ಯಾಂಟಮ್ ರೋಡ್ ಮ್ಯಾಪ್‌ನ ಪ್ರಥಮ ಹಂತದ ಅನುಷ್ಠಾನಕ್ಕೆ ₹10ಕೋಟಿ ಅನುದಾನ ನೀಡಲಾಗುವುದು ಎಂದು ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.



