ಮೈಸೂರು : ಚಾಮುಂಡೇಶ್ವರಿ ಪ್ರತಿಮೆಗೆ ಪುಷ್ಪಾರ್ಚನೆ ನಡೆಸುವ ಮೂಲಕ ಬಾನು ಮುಷ್ತಾಕ್ ವೈಭವೋಪೇತ ದಸರಾ ಉತ್ಸವಕ್ಕೆ ಚಾಲನೆ ನೀಡಿದರು. ಸಿಎಂ ಸಿದ್ದರಾಮಯ್ಯ, ಸಚಿವ ಮಹದೇವಪ್ಪ ಸೇರಿದಂತೆ ಹಲವು ಗಣ್ಯರು ಈ ಐತಿಹಾಸಿಕ ದಸರಾ ಮಹೋತ್ಸವದ ಉದ್ಘಾಟನಾ ಕ್ಷಣಕ್ಕೆ ಸಾಕ್ಷಿಯಾದರು. ಇಂದಿನಿಂದ ವಿಜಯ ದಶಮಿಯವರೆಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಸೇರಿದಂತೆ , ಸಾಂಸ್ಕೃತಿಕ, ಸಾಹಿತ್ಯಿಕ, ಕ್ರೀಡೆ, ಜನಪದ ಕಾರ್ಯಕ್ರಮಗಳು ಪ್ರಾರಂಭವಾಗಲಿದೆ.

ಚಾಮುಂಡಿಬೆಟ್ಟದ ದೇವಸ್ಥಾನವನ್ನು ಕಬ್ಬಿನ ಜಲ್ಲೆ ಮತ್ತು ಹೂಗಳಿಂದ ಅಲಂಕಾರ ಮಾಡಲಾಗಿದೆ. ದೇವಸ್ಥಾನ ಒಳ ಭಾಗದಲ್ಲಿನ ಪ್ರತಿ ಕಂಬಕ್ಕೂ ಕಬ್ಬು ಕಟ್ಟಿ ಅಲಂಕಾರ ಮಾಡಲಾಗಿದೆ. ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದ್ದು, ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಿ ನಾಡಹಬ್ಬಕ್ಕೆ ಅದ್ದೂರಿ ಚಾಲನೆ ನೀಡಲು ಜಿಲ್ಲಾಡಳಿತ ಸಜ್ಜು ಮಾಡಿತ್ತು.
ಉದ್ಘಾಟನಾ ಕಾರ್ಯಕ್ರಮ ಹಿನ್ನೆಲೆ ಚಾಮುಂಡಿಬೆಟ್ಟದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆಗೊಂಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರವಹಿಸಲಾಗಿದೆ.
ಇನ್ನು, ದಸರಾಗೆ ಅರಮನೆ ನಗರಿ ಮೈಸೂರು ನವವಧುವಿನಂತೆ ಸಿಂಗಾರಗೊಂಡಿದೆ. ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ಬೀದಿಗಳು ಎಲ್ಲರನ್ನೂ ಕೈಬೀಸಿ ಕರೆಯುತ್ತಿದೆ.
ಇಂದಿನಿಂದ 10 ದಿನಗಳ ಕಾಲ ಅರಮನೆ ನಗರಿ ಕಂಗೊಳಿಸಳಿದ್ದು, ವಿವಿಧ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ದಸರಾದ ಆಕರ್ಷಣೆಯ ಕೇಂದ್ರ ಬಿಂದುವಾದ ಅಂಬಾರಿ ಮೆರವಣಿಗೆಗೆ ಈಗಾಗಲೇ ಭರ್ಜರಿ ತಯಾರಿ ನಡೆದಿದೆ. ತಿಂಗಳ ಹಿಂದೆಯೇ ಅರಮನೆ ಆವರಣದಲ್ಲಿ ಬೀಡುಬಿಟ್ಟಿದ್ದ ಗಜಪಡೆ ನಿತ್ಯದ ತಾಲೀಮ ಮುಗಿಸಿ ತಾಯಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿ ಹೊತ್ತು ಸಾಗಲು ಸರ್ವಸನ್ನದ್ಧಗೊಂಡಿದೆ.
ಇನ್ನು ಸಿಎಂ ಸಿದ್ದರಾಮಯ್ಯ, ಬಾನು ಮುಷ್ತಾಕ್ ಸೇರಿದಂತೆ ಅನೇಕ ಸಚಿವರು, ಶಾಸಕರು ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದರು. ಈ ವೇಳೆ ಬಾನು ಮುಷ್ತಾಕ್ ಅವರು ಮಲ್ಲಿಗೆ ಹೂವು ಮುಡಿದು ಚಾಮುಂಡೇಶ್ವರಿ ದರ್ಶನ ಪಡೆದರು.
ದರ್ಶನ ಪಡೆದ ಬಳಿಕ ಸಿಎಂ ಸಿದ್ದರಾಮಯ್ಯ ಅವರ ಪಕ್ಕದಲ್ಲಿ ನಿಂತು ದೇವಿಯ ಮಂಗಳಾರತಿ ಸ್ವೀಕರಿಸಿದ್ದಾರೆ. ಬಳಿಕ ಚಾಮುಂಡಿ ಪ್ರಾಧಿಕಾರದ ವತಿಯಿಂದ ಬಾನು ಮುಷ್ತಾಕ್ ಗೆ ನೀಲಿ ಸೀರೆ ನೀಡಿದ್ದು, ಈ ವೇಳೆ ಬಾನು ಮುಷ್ತಾಕ್ ಬಾವುಕರಾಗಿದ್ದಾರೆ. ಕೂಡಲೇ ಸೀರೆಯಿಂದ ಕಣ್ಣೀರು ಒರೆಸಿಕೊಂಡರು.