ಮೈಸೂರು: ಮೈಸೂರು ದಸರಾ ಮಹೋತ್ಸವದ ಅಂಗವಾಗಿ, ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಇಂದಿನಿಂದ ತಾಲೀಮು ಆರಂಭಿಸಿದೆ. ಮೈಸೂರು ಅರಮನೆ ಆವರಣದಲ್ಲಿ ಬೀಡುಬಿಟ್ಟಿರುವ 9 ಆನೆಗಳು ಅರಮನೆಯಿಂದ ಹಳೇ ಆರ್.ಎಂ.ಸಿ ವರೆಗೂ ಗಂಭೀರ ಹೆಜ್ಜೆ ಹಾಕಿದವು. ಮೊದಲ ಹಂತದಲ್ಲಿ ಮಾತ್ರ ಈ ಪಥದಲ್ಲಿ ತಾಲೀಮು ನಡೆಯಿತು.
ಡಿಸಿಎಫ್ ಪ್ರಭುಗೌಡ ಅವರು ಮಾತನಾಡಿ, “ಎಲ್ಲ ಆನೆಗಳು ಆರೋಗ್ಯವಾಗಿದ್ದು, ವೈದ್ಯರು ತಪಾಸಣೆ ನಡೆಸಿದ್ದಾರೆ. ಮುಂದಿನ ಹಂತದಲ್ಲಿ ಬನ್ನಿಮಂಟಪವರೆಗೆ ತಾಲೀಮು ನಡೆಯಲಿದೆ,” ಎಂದರು.
ಇಂದು ವಿಶ್ವ ಆನೆಗಳ ದಿನಾಚರಣೆ, ಈ ಹಿನ್ನಲೆ ಅರಮನೆಯಲ್ಲಿ 60 ಜನ ಶಾಲಾ ಮಕ್ಕಳಿಗೆ ಆನೆಗಳ ಬಗ್ಗೆ ಹೇಳಿಕೊಡಲಾಗುತ್ತದೆ. ಆನೆಗಳ ಸ್ವಭಾವ, ನಡವಳಿಕೆ, ಆಹಾರ ಪದ್ಧತಿಗಳನ್ನು ಮಕ್ಕಳಿಗೆ ಹೇಳಿಕೊಡುವ ಮೂಲಕ ಆನೆಗಳ ದಿನವನ್ನು ಆಚರಣೆ ಮಾಡುತ್ತೇವೆ ಎಂದು ಡಿಸಿಎಫ್ ಪ್ರಭುಗೌಡ ಹೇಳಿದರು.