ಮೈಸೂರು: ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ ಇದು ಸುವಾರ್ತೆ. ಇನ್ನು ಮುಂದೆ ಮುಂಬೈ, ಚೆನ್ನೈ, ಹೈದರಾಬಾದ್ ಮತ್ತು ಗೋವಾಗೆ ಮೈಸೂರಿನಿಂದ ನೇರ ವಿಮಾನ ಸೇವೆ ಪಡೆಯುವ ಅವಕಾಶ ಲಭ್ಯವಾಗುವ ಸಾಧ್ಯತೆ ಇದೆ. ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಇಂಡಿಗೋ ಏರ್ಲೈನ್ಸ್‌ಗೆ ಪತ್ರ ಬರೆದು ಈ ಮಹತ್ವದ ನಗರಗಳಿಗೆ ನೇರ ವಿಮಾನ ಸಂಚಾರ ಆರಂಭಿಸಲು ಮನವಿ ಮಾಡಿದ್ದಾರೆ.
ಮೈಸೂರು ದೇಶದ ಪ್ರಮುಖ ಪ್ರವಾಸಿ ತಾಣವಾಗಿದ್ದು, ಇಂತಹ ನೇರ ವಿಮಾನ ಸಂಚಾರವು ಉದ್ಯಮ, ಪ್ರವಾಸೋದ್ಯಮ, ಶಿಕ್ಷಣ ಹಾಗೂ ಸ್ಥಳೀಯ ನಾಗರಿಕರಿಗೆ ತುಂಬಾ ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ. ಇಂಡಿಗೋ ಏರ್ಲೈನ್ಸ್ ಕೂಡ ಈ ಬೇಡಿಕೆಗೆ ಸೂಕ್ತ ಭರವಸೆ ನೀಡಿದ್ದು, ಶೀಘ್ರದಲ್ಲೇ ಈ ಸೇವೆ ಆರಂಭವಾಗಲಿದೆ ಎಂಬ ನಿರೀಕ್ಷೆಯಿದೆ.
ಸಂಸದ ಯದುವೀರ್ ಅವರು ಈ ಪ್ರಯತ್ನದಿಂದ ಮೈಸೂರು ಅಭಿವೃದ್ಧಿಗೆ ಮತ್ತೊಂದು ಹೆಜ್ಜೆ ಎಂದು ಅಭಿಪ್ರಾಯಪಟ್ಟಿದ್ದಾರೆ.