Tuesday, May 20, 2025
Google search engine

Homeರಾಜಕೀಯಮೈಸೂರು: 'ಗೋ ಬ್ಯಾಕ್, ಗೋ ಬ್ಯಾಕ್ ಅಮಿತ್‌ ಶಾ ಎಂದು ಕಾಂಗ್ರೆಸ್‌ ಪ್ರತಿಭಟನೆ

ಮೈಸೂರು: ‘ಗೋ ಬ್ಯಾಕ್, ಗೋ ಬ್ಯಾಕ್ ಅಮಿತ್‌ ಶಾ ಎಂದು ಕಾಂಗ್ರೆಸ್‌ ಪ್ರತಿಭಟನೆ

ಮೈಸೂರು: ‘ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ತೆರಿಗೆ ಹಂಚಿಕೆಯಲ್ಲಿ ಅನ್ಯಾಯ ಎಸಗುತ್ತಿದೆ’ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಮೈಸೂರು ವಿನೋಬಾ ರಸ್ತೆಯಲ್ಲಿರುವ ಮಹಾರಾಣಿ ವಿಜ್ಞಾನ ಕಾಲೇಜು ಕಟ್ಟಡದ ಕಾಂಪೌಂಡ್‌ಗೆ ಪೋಸ್ಟರ್‌ ಅಂಟಿಸಿ ಭಾನುವಾರ ಪ್ರತಿಭಟನೆ ನಡೆಸಿದರು.

‘ಕೇಂದ್ರ ಸಚಿವರೇ ರಾಜ್ಯಕ್ಕೆ ನ್ಯಾಯ ಒದಗಿಸದೇ ಪ್ರವಾಸವನ್ನೇಕೆ ಕೈಗೊಂಡಿದ್ದೀರಿ?’ ಎಂದು ಕೇಳಿದ ಅವರು, ‘ಗೋ ಬ್ಯಾಕ್, ಗೋ ಬ್ಯಾಕ್’’ ಎಂದು ಘೋಷಣೆ ಹಾಕಿದರು.

ಕೇಂದ್ರ ಸಚಿವರ ವಿರುದ್ಧದ ಬರಹಗಳಿದ್ದ ಪೋಸ್ಟರ್‌ಗಳನ್ನು ಅಂಟಿಸಲು ಮುಖಂಡರು ಮುಂದಾದರು. ಅವರನ್ನು ಪೊಲೀಸರು ತಡೆದು ಪೋಸ್ಟರ್‌ಗಳನ್ನು ವಶಕ್ಕೆ ಪಡೆದು ಜೀಪ್‌ನಲ್ಲಿ ಇಟ್ಟುಕೊಂಡಿದ್ದರು. ‘ಸರ್ಕಾರಿ ಕಟ್ಟಡದ ಮೇಲೆ ಪೋಸ್ಟರ್‌ ಅಂಟಿಸಿದರೆ ಪ್ರಕರಣ ದಾಖಲಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಪಕ್ಷದ ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ.ವಿಜಯಕುಮಾರ್ ಪೊಲೀಸರೊಂದಿಗೆ ಮಾತುಕತೆ ನಡೆಸಿ ಪೋಸ್ಟರ್‌ಗಳನ್ನು ವಾಪಸ್ ಪಡೆದರು.

‘ಕನ್ನಡಿಗ ವಿರೋಧಿ ಮೋದಿ, ಅಮಿತ್‌ ಶಾಗೆ ಧಿಕ್ಕಾರ, ನಮ್ಮ ತೆರಿಗೆ-ನಮ್ಮ ಹಕ್ಕು, ಕರ್ನಾಟಕಕ್ಕೆ ಮಲತಾಯಿ ಧೋರಣೆ ನೀತಿ ಅನುಸರಿಸುತ್ತಿರುವ ಕೇಂದ್ರ ಸರ್ಕಾರಕ್ಕೆ ಧಿಕ್ಕಾರ’ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು ಕೆಲವು ಪೋಸ್ಟರ್‌ಗಳನ್ನು ಅಂಟಿಸಿದರು.

‘ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಲೇ ಇದೆ. ರಾಜ್ಯದಿಂದ ಸಂಗ್ರಹವಾಗುತ್ತಿರುವ ತೆರಿಗೆಯಲ್ಲಿ ಶೇ.20ರಷ್ಟು ಪಾಲನ್ನೂ ಕೊಡುತ್ತಿಲ್ಲ. ರಾಜ್ಯ ಜನರು ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿದ್ದರೂ ಪರಿಹಾರ ಬಿಡುಗಡೆ ಮಾಡಿಲ್ಲ. ಮೇಕೆದಾಟು, ಭದ್ರಾ ಮೇಲ್ದಂಡೆ ಸೇರಿದಂತೆ ಹಲವು ಯೋಜನೆಗಳಿಗೆ ಸಹಕಾರ ಕೊಡುತ್ತಿಲ್ಲ’ ಎಂದು ದೂರಿದರು.

‘ನಾವು ಯಾರನ್ನೂ ವೈಯಕ್ತಿಕವಾಗಿ ವಿರೋಧಿಸುತ್ತಿಲ್ಲ. ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ಧ್ವನಿ ಎತ್ತುತ್ತಿದ್ದೇವೆ. ಕೇಂದ್ರ ಸಚಿವರು ರಾಜ್ಯದ ಬೇಡಿಕೆಗೆ ಸ್ಪಂದಿಸದೆ ಬರಿ ಕೈಯಲ್ಲಿ ಬಂದಿದ್ದಾರೆ’ ಎಂದು ಆರೋಪಿಸಿದರು.

‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಹೀಗಾಗಿ, ಅಮಿತ್ ಶಾ ವಾಸ್ತವ್ಯ ಹೂಡಿರುವಲ್ಲಿಗೇ ತೆರಳಿ ಪ್ರತಿಭಟನೆ ನಡೆಸಬಹುದಿತ್ತು. ಆದರೆ, ನಮ್ಮದು ನೈತಿಕ ಹೋರಾಟವಾಗಿದೆ. ತಕ್ಷಣವೇ ನಮ್ಮ ಪಾಲಿನ ತೆರಿಗೆ ಹಣವನ್ನು ಕೊಡಬೇಕು. ಬರ ಪರಿಹಾರ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು.

ನಗರ ಜಿಲ್ಲಾ ಸಮಿತಿಯ ಅಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿಗಳಾದ ಎಂ.ಶಿವಣ್ಣ, ಭಾಸ್ಕರ್ ಎಲ್.ಗೌಡ, ಮಾಜಿ ಮೇಯರ್‌ಗಳಾದ ಬಿ.ಕೆ.ಪ್ರಕಾಶ್, ಪುಷ್ಪಲತಾ ಚಿಕ್ಕಣ್ಣ, ವಕ್ತಾರ ಕೆ.ಮಹೇಶ್, ಎಂ.ಕೆ.ಅಶೋಕ, ಶ್ರೀಧರಗೌಡ ಪಾಲ್ಗೊಂಡಿದ್ದರು.

RELATED ARTICLES
- Advertisment -
Google search engine

Most Popular