ಮೈಸೂರು: ಆಷಾಢ ಮಾಸದ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಅಪೂರ್ವ ಸ್ನೇಹ ಬಳಗದ ವತಿಯಿಂದ ಮೈಸೂರು ಪಾಕ್ ವಿತರಿಸಲಾಯಿತು. ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದ ಮುಂಭಾಗ ನಡೆದ ಈ ಕಾರ್ಯಕ್ರಮಕ್ಕೆ ಪ್ರಧಾನ ಅರ್ಚಕ ಡಾ. ಶಶಿಶೇಖರ್ ದೀಕ್ಷಿತ್ ಚಾಲನೆ ನೀಡಿದರು.
ಪಾರಂಪರಿಕ ಸಿಹಿಯಾದ ಮೈಸೂರು ಪಾಕ್ ಆರೋಗ್ಯದತ್ತ ಸಹಕಾರಿಯಾಗುತ್ತದೆ ಎಂದು ಅವರು ವಿವರಿಸಿದರು. ಕಡಲೆಹಿಟ್ಟು ಚರ್ಮದ ಆರೋಗ್ಯವನ್ನು ಕಾಪಾಡಲು ಹಾಗೂ ತುಪ್ಪ ಮೂಳೆಯ ಶಕ್ತಿಗಾಗಿ ಸಹಕಾರಿ ಎಂದರು.
ಮೈಸೂರು ಪಾಕ್ ದೇಶ-ವಿದೇಶಗಳಲ್ಲಿ ಜನಪ್ರಿಯ ಸಿಹಿಯಾಗಿದ್ದು, ಮೈಸೂರಿಗರು ಅಷ್ಟೇ ಅಲ್ಲದೆ ಪ್ರತಿಯೊಬ್ಬರೂ ಕೂಡ ಹಬ್ಬಗಳಲ್ಲಿ ಹೆಚ್ಚಾಗಿ ಮೈಸೂರು ಪಾಕ್ ಬಳಸಲು ಇಚ್ಛಿಸುತ್ತಾರೆ ಎಂದು ಶಶಿಶೇಖರ್ ದೀಕ್ಷಿತ್ ತಿಳಿಸಿದರು.
ಈ ಸಂದರ್ಭದಲ್ಲಿ ಅರ್ಚಕರಾದ ಸೋಮಣ್ಣ, ಅಪೂರ್ವ ಸುರೇಶ್, ಗಿರೀಶ್, ಜಗದೀಶ್, ಜಿ. ರಾಘವೇಂದ್ರ, ಸವಿತಾ ಘಾಟೈ, ಜಯಶ್ರೀ ಶಿವರಾಮ್ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.