ಮೈಸೂರು: ವಿಶ್ವವಿಖ್ಯಾತ ಅಂಬಾ ವಿಲಾಸ ಅರಮನೆಯ ಪ್ರವೇಶ ಶುಲ್ಕವನ್ನು ಇಂದಿನಿಂದ ಹೆಚ್ಚಿಸಲಾಗಿದ್ದು ,ಜಿ ಎಸ್ ಟಿ ಸೇರಿ ಪರಿಷ್ಕೃತ ಪಟ್ಟಿ ಬಿಡುಗಡೆ ಮಾಡಿದ್ದು ಪ್ರವಾಸಿಗರ ಜೇಬಿಗೆ ಅರಮನೆ ಮಂಡಳಿಯಿಂದ ಕತ್ತರಿ ಬಿದ್ದಿದೆ. ಇದಕ್ಕೆ ಪ್ರವಾಸಿಗರು, ಹೋಟೆಲ್ ಮಾಲೀಕರು ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕೂಡಲೇ ಹೆಚ್ಚಾದ ದರವನ್ನು ಕಡಿಮೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಭಾರತೀಯ ವಯಸ್ಕರಿಗೆ 20 ರೂಪಾಯಿ ಹೆಚ್ಚಳ ಮಾಡಿ 120 ರೂಪಾಯಿಗೆ ಪ್ರವೇಶ ಶುಲ್ಕ ಹೆಚ್ಚಿಸಿದರೆ, 10ರಿಂದ 18 ವರ್ಷ ಮಕ್ಕಳಿಗೆ 50 ರೂ. ಇದ್ದ ಟಿಕೆಟ್ ದರ 70 ರೂಪಾಯಿಗೆ ಮಾಡಲಾಗಿದೆ. ಶೈಕ್ಷಣಿಕ ಪ್ರವಾಸ ಕೈಗೊಳ್ಳುವ ಶಾಲಾ/ಕಾಲೇಜು ವಿದ್ಯಾರ್ಥಿಗಳಿಗೆ 30ರಿಂದ 50 ರೂಪಾಯಿಗೆ ಹೆಚ್ಚಳ ಮಾಡಿದರೆ, ವಿದೇಶಿ ಪ್ರವಾಸಿಗರಿಗೆ 100 ರೂ. ಇದ್ದ ಟಿಕೆಟ್ ಪ್ರವೇಶ ಶುಲ್ಕವನ್ನು ಏಕಾಏಕಿ 1,000 ರೂಪಾಯಿಗೆ ಹೆಚ್ಚಿಸಲಾಗಿದೆ.
ಇದಕ್ಕೆ ಹಲವರಿಂದ ವಿರೋಧ ವ್ಯಕ್ತವಾಗಿದೆ. ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶ ಮಾಡಿ ಪರಿಷ್ಕೃತ ಅರಮನೆಯ ಪ್ರವೇಶ ದರವನ್ನು ವಾಪಸ್ ಪಡೆಯಬೇಕು. ಅರಮನೆ ವೀಕ್ಷಣೆ ಮಾಡಲು ಈಗ ನಿಗದಿಪಡಿಸಿದ ದರ ಹೆಚ್ಚಾಗಿದೆ. ಏಕಾಏಕಿ 100 ರೂಪಾಯಿಯಿಂದ 1,000 ರೂಪಾಯಿಗೆ ವಿದೇಶಿ ಪ್ರವಾಸಿಗರ ಪ್ರವೇಶ ಶುಲ್ಕ ಹೆಚ್ಚಳ ಮಾಡಿರುವುದು ತಪ್ಪು ಎಂದು ಹಲವರು ಹೇಳಿದ್ದಾರೆ.
ಶುಲ್ಕ ಹೆಚ್ಚಳ ವಾಪಸ್ ಪಡೆಯಿರಿ
”ಅರಮನೆಯ ಪ್ರವೇಶ ಶುಲ್ಕ ಹೆಚ್ಚಳ ಅವೈಜ್ಞಾನಿಕವಾಗಿದೆ. ವಿದೇಶಿ ಪ್ರವಾಸಿಗರಿಗೆ 10 ಪಟ್ಟು ದರ ಹೆಚ್ಚಿಸಲಾಗಿದೆ. ಕಳೆದ 10 ವರ್ಷಗಳಿಂದ ಮೈಸೂರಿಗೆ ಬರುವ ವಿದೇಶಿ ಪ್ರವಾಸಿಗರ ಪ್ರಮಾಣ ಕಡಿಮೆಯಾಗಿದೆ. ಈ ಕ್ರಮದಿಂದ ವಿದೇಶಿ ಪ್ರವಾಸಿಗರನ್ನು ನಾವು ಇನ್ನೂ ಕಳೆದುಕೊಳ್ಳಬೇಕಾಗುತ್ತದೆ. ಹಾಗಾಗಿ ಜಿಲ್ಲಾಡಳಿತ ಮರು ಪರಿಶೀಲನೆ ಮಾಡಬೇಕು.
ವಿದೇಶಿಗರಿಗೆ 300 ರೂಪಾಯಿ ಮಾಡಿದರೆ ಸೂಕ್ತ. ಏಕಾಏಕಿ 1000 ರೂಪಾಯಿ ಮಾಡಿದರೇ ಹೇಗೆ? ಮೈಸೂರಿಗೆ ಬನ್ನಿ ಎಂದು ಕರೆಯಬೇಕು, ಎಲ್ಲರೂ ಮಾರ್ಕೆಟ್ ಮಾಡಬೇಕು. ಯಾರು ಉಪ ನಿರ್ದೇಶಕರಿಗೆ ಈ ರೀತಿಯಾಗಿ ಮಾಡಿ ಅಂತ ಆದೇಶ ಕೊಡುತ್ತಾರೋ ಗೊತ್ತಿಲ್ಲ. ಈ ಅವೈಜ್ಞಾನಿಕ ದರ ಹಿಂಪಡೆದು, ವೈಜ್ಞಾನಿಕ ದರವನ್ನು ಅಳವಡಿಸಬೇಕು ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ಆಗ್ರಹಿಸಿದರು.