ಮೈಸೂರು: ಬಂಡೀಪುರ ಭಾಗದಲ್ಲಿ ಮಹಿಳೆಯನ್ನು ಬಲಿ ಪಡೆದಿದ್ದ ಹುಲಿಯನ್ನು ಕೊನೆಗೂ ಸೆರೆ ಹಿಡಿಯಲಾಗಿದೆ.
ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹೆಡಿಯಾಲ ಗ್ರಾಮದ ಬಳಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಅರವಳಿಕೆ ಚುಚ್ಚುಮದ್ದು ನೀಡಿ ಯಶಸ್ವಿಯಾಗಿ ಹುಲಿಯನ್ನು ಸೆರೆ ಹಿಡಿದಿದ್ದಾರೆ.
ಸೋಮವಾರ ಮಧ್ಯರಾತ್ರಿ 1.45ರ ಹೊತ್ತಿಗೆ ಎರಡು ದಿನದ ಹಿಂದೆ ಹಸುವೊಂದನ್ನು ಕೊಂದಿದ್ದ ಜಾಗಕ್ಕೆ ಬಂದ ಹುಲಿಯನ್ನು ಅರವಳಿಕೆ ನೀಡಿ ಸೆರೆ ಹಿಡಿಯಲಾಗಿದೆ. 10 ವರ್ಷದ ಗಂಡು ಹುಲಿ ಇದಾಗಿದ್ದು, ಸದ್ಯ ಮೈಸೂರು ಮೃಗಾಲಯದಲ್ಲಿ ಬಿಡಲಾಗಿದೆ.
ನ.24ರಂದು ಹೆಡಿಯಾಲ ವಲಯ ಅರಣ್ಯ ವ್ಯಾಪ್ತಿಯಲ್ಲಿ ಬಳ್ಳೂರು ಹುಂಡಿ ಬಳಿ ದನ ಮೇಯಿಸಲು ಹೋಗಿದ್ದ ರತ್ನಮ್ಮ (55) ಎಂಬ ಮಹಿಳೆಯ ಮೇಲೆ ಹುಲಿ ದಾಳಿ ನಡೆಸಿ ಆಕೆಯನ್ನು ಕೊಂದು ಹಾಕಿತ್ತು. ಅಲ್ಲದೇ ದೇಹದ ಭಾಗವನ್ನೂ ತಿಂದು ಹಾಕಿತ್ತು. ಮರು ದಿನ ಅದೇ ಗ್ರಾಮದ ಹಸುವೊಂದರ ಮೇಲೆ ದಾಳಿ ಮಾಡಿ ಕೊಂದು ಹಾಕಿತ್ತು. ನಂತರ ಜನರಲ್ಲಿ ಆತಂಕ ಹೆಚ್ಚಾಗಿ ಅರಣ್ಯ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಸದ್ಯ ಮೂರು ದಿನಗಳ ಸತತ ಕಾರ್ಯಾಚರಣೆಯಿಂದ ಹುಲಿಯನ್ನು ಸೆರೆ ಹಿಡಿಯಲಾಗಿದೆ.
ಅಧಿಕಾರಿಗಳು ಸೇರಿ 207 ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆದಿದೆ. 100 ಗಿರಿಜನರು ಹುಲಿ ಪತ್ತೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.