ಮೈಸೂರು: ಮೈಸೂರು ಮಹಾನಗರ ಪಾಲಿಕೆ ನೌಕರರ ಸಂಘ ಹಾಗೂ ರಾಜ್ಯ ಮಹಾನಗರ ಪಾಲಿಕೆಗಳ ನೌಕರರ ಪರಿಷತ್ ಸದಸ್ಯರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪಾಲಿಕೆ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭಾಗವಹಿಸಿ ನೌಕರರಿಗೆ ಬೆಂಬಲ ಸೂಚಿಸಿದರು.
‘ಮೈಸೂರು ಸಿಎಂನವರ ಕ್ಷೇತ್ರವಾಗಿರುವಾಗಲೂ ಈ ಪ್ರತಿಭಟನೆಯನ್ನು ನಿರ್ಲಕ್ಷ್ಯಿಸುವುದು ಸರಿಯಲ್ಲ. ಸಿದ್ದರಾಮಯ್ಯ ತಕ್ಷಣವೇ ನೌಕರರ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಯಡಿಯೂರಪ್ಪ ಹೇಳಿದರು.
ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ‘ಪಾಲಿಕೆ ನೌಕರರು ಜನರ ಆರೋಗ್ಯಕ್ಕಾಗಿ ದುಡಿದು ತಮ್ಮ ಆರೋಗ್ಯ ಹಾಳು ಮಾಡುತ್ತಿದ್ದಾರೆ. ಅವರ ಬೇಡಿಕೆಗಳು ನ್ಯಾಯಯುತವಾಗಿವೆ. ವಿರೋಧ ಪಕ್ಷಗಳು ಈ ಧ್ವನಿಯನ್ನು ವಿಧಾನಸಭೆಯಲ್ಲಿ ಎತ್ತುತ್ತವೆ’ ಎಂದರು.
ಈ ವೇಳೆ ಶಾಸಕ ಟಿ.ಎಸ್. ಶ್ರೀವತ್ಸ, ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ, ಮಾಜಿ ಮೇಯರ್ ಶಿವಕುಮಾರ್, ಮುಖಂಡ ಅಪ್ಪಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.