Monday, January 12, 2026
Google search engine

Homeಸ್ಥಳೀಯನಾಮಧಾರಿಗೌಡ ಸಮುದಾಯ ಭವನಕ್ಕೆ 25ನೇ ವರ್ಷದ ಬೆಳ್ಳಿ ಹಬ್ಬ ಸಂಭ್ರಮ

ನಾಮಧಾರಿಗೌಡ ಸಮುದಾಯ ಭವನಕ್ಕೆ 25ನೇ ವರ್ಷದ ಬೆಳ್ಳಿ ಹಬ್ಬ ಸಂಭ್ರಮ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಮೀಸಲಾತಿಯ ಚರ್ಚೆಗಳು ಪ್ರಸ್ತುತ ಸಮಾಜದಲ್ಲಿ ಹೆಚ್ಚಾಗಿ ನಡೆಯುತ್ತಿದ್ದು ಇದರಿಂದ ಎಷ್ಟರ ಮಟ್ಟಕ್ಕೆ ಆ ಸಮಾಜಗಳಿಗೆ ಶಕ್ತಿ ಸಿಗಲಿದೆ ಎಂಬುದಕ್ಕಿಂತ ರಾಜಕೀಯವಾಗಿ ದುರುಪಯೋಗ ಆಗುತ್ತಿವೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕ ಸಚಿವ ಎಚ್.ಡಿ.ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದರು.

ಪಟ್ಟಣದ ಅಖಿಲ ನಾಮದಾರಿ ಗೌಡ ಸಮುದಾಯ ಭವನದಲ್ಲಿ ತಾಲೂಕು ನಾಮಧಾರಿಗೌಡ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ಸಮುದಾಯ ಭವನಕ್ಕೆ ೨೫ ವರ್ಷಗಳ ಬೆಳ್ಳಿ ಹಬ್ಬದ ಸಂಭ್ರಮ ಆಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಧ್ವನಿಯಿಲ್ಲದ ಸಮಾಜಗಳನ್ನು ಗುರುತಿಸುವುದು ನಮ್ಮಗಳ ಕರ್ತವ್ಯ ಎಂದರು.

ರಾಜ್ಯದಲ್ಲಿ ನಾಮಧಾರಿ ಸಮುದಾಯ ಕಡಿಮೆ ಸಂಖ್ಯೆಯಲ್ಲಿದ್ದು ಸಮಾಜವನ್ನು ದೊಡ್ಡಮಟ್ಟದಲ್ಲಿ ಗುರುತಿಸಿ ರಾಜಕೀಯ ಸ್ಥಾನಮಾನಗಳನ್ನು ನೀಡಿಲ್ಲ ಎಂಬ ನೋವು ಸಮುದಾಯಕ್ಕೆ ಇದೆ. ಮುಂದಿನ ದಿನಗಳಲ್ಲಿ ರಾಜಕೀಯ ಪ್ರಾತಿನಿಧ್ಯ ನೀಡಿ ಪ್ರಾಮಾಣಿಕವಾಗಿ ಸರಿಪಡಿಸುತ್ತೇನೆ. ಅಲ್ಲದ ಸಮಾಜವನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರದಿಂದ ಶಿಫಾರಸ್ಸು ಬಂದರೆ ಕೂಡಲೇ ನಾನು ಪ್ರಧಾನಮಂತ್ರಿಗಳೊಂದಿಗೆ ಹಾಗೂ ಸಂಬಂಧಪಟ್ಟ ಇಲಾಖೆ ಸಚಿವರೊಂದಿಗೆ ಚರ್ಚಿಸಿ ಶೀಘ್ರವಾಗಿ ನಾಮಧಾರಿ ಸಮಾಜಕ್ಕೆ ಓಬಿಸಿ ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಲಾಗುತ್ತೇನೆ ಎಂದು ಭರವಸೆ ನೀಡಿದರು.

ಕೆಲವರು ಹಿಂದುಳಿದ ವರ್ಗದ ನಾಯಕರು ಎಂದು ಬೋರ್ಡ್ ಹಾಕಿಕೊಳ್ಳುತ್ತಾರೆ ಆದರೆ ಅವರು ಎಷ್ಟು ಹಿಂದುಳಿದ ವರ್ಗದ ನಾಯಕರನ್ನು ಬೆಳೆಸಿದ್ದಾರೆ. ಆ ಸಮುದಾಯಕ್ಕೆ ಸಾಮಾಜಿಕ ನ್ಯಾಯ ನೀಡಿದ್ದಾರೆ ಎಂದು ಪ್ರಶ್ನಿಸಿದ ಕೇಂದ್ರ ಸಚಿವರು ಸಮುದಾಯಕ್ಕೆ ಸಿಎ ನಿವೇಶನ ದೊರಕಿಸಿದರೆ ಹಾಗೂ ಸಮುದಾಯ ಭವನದ ಜೀರ್ಣೋದ್ಧಾರ ಕಾರ್ಯ ಮಾಡುವ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರ ಮೂಲಕ ಹೆಚ್ಚಿನ ಅನುದಾನ ಕೊಡಿಸುತ್ತೇನೆ ಎಂದರು.

ಶಾಸಕ ಡಿ.ರವಿಶಂಕರ್ ಮಾತನಾಡಿ ನಾಮಧಾರಿಗೌಡ ಸಮುದಾಯವನ್ನು ಓಬಿಸಿ ಪಟ್ಟಿಗೆ ಸೇರಿಸಲು ನೀವುಗಳು ನಮಗೆ ಮನವಿ ಸಲ್ಲಿಸಿದ್ದು ಈ ಬಗ್ಗೆ ನಾನು ಸಂಬಂಧಪಟ್ಟ ಸಚಿವರು ಹಾಗೂ ನಮ್ಮ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರಿಗೆ ಚರ್ಚಿಸಿ ಕೇಂದ್ರಕ್ಕೆ ಶಿಫಾರಸು ಮಾಡಿಸಲು ಶ್ರಮಿಸುವುದಾಗಿ ಭರವಸೆ ನೀಡಿದರಲ್ಲದೇ ನಮ್ಮ ಕುಟುಂಬ ಇಂದಿನಿಂದಲೂ ಸಮುದಾಯದ ಪರವಾಗಿದೆ. ಭವನ ನಿರ್ಮಾಣಕ್ಕೆ ಆರ್ಥಿಕ ನೆರವನ್ನು ನಮ್ಮ ತಂದೆಯವರಾದ ದೊಡ್ಡಸ್ವಾಮಿಗೌಡರು ನೀಡಿದ್ದಾರೆ ಎಂದು ತಿಳಿಸಿದರು.

ಹಾಸನ ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಕಳೆದ ಅವಧಿಯಲ್ಲಿ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಭೂಮಿ ಪೂಜೆ ನೆರವೇರಿಸಿದ್ದರು ಈ ರಸ್ತೆ ಗುಂಡಿ ಬಿದ್ದು ಸಂಚಾರಕ್ಕೆ ಅನಾನುಕೂಲವಾಗಿರುವುದರಿಂದ ತಾವುಗಳು ಈ ಬಗ್ಗೆ ಹೆಚ್ಚಿನ ಗಮನಹರಿಸಿ ಸಂಬಂಧಪಟ್ಟ ಕೇಂದ್ರ ಸಚಿವರ ಗಮನಕ್ಕೆ ತಂದು ಶೀಘ್ರವಾಗಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಮಾಡಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರಲ್ಲಿ ಮನವಿ ಮಾಡಿದರು.

ನಾವು ಹಿಂದಿನಿಂದಲೂ ಸಮುದಾಯಕ್ಕೆ ರಾಜಕೀಯ ಸ್ಥಾನಮಾನಗಳನ್ನು ಕೊಟ್ಟುಕೊಂಡು ಬರುತ್ತಿದ್ದು ಮುಂದಿನ ದಿನಗಳಲ್ಲೂ ಅದನ್ನು ಮುಂದುವರಿಸುತ್ತೇನೆ. ಸುಮದಾಯ ಭವನದ ಶೌಚಾಲಯ ನಿರ್ಮಾಣಕ್ಕೆ ೧೦ಲಕ್ಷ ರೂಪಾಯಿಗಳ ಅನುದಾನವನ್ನು ಶೀಘ್ರವಾಗಿಯೇ ಬಿಡುಗಡೆ ಮಾಡುತ್ತೇನೆ. ಸಮುದಾಯದವರು ನನ್ನ ಬೆನ್ನಿಗೆ ನಿಂತು ಶಾಸಕನಾಗಿ ಮಾಡಿದ್ದೀರಿ ನಿಮ್ಮ ಕಷ್ಟ ಸುಖಗಳಿಗೆ ನಿಮ್ಮ ಮನೆ ಮಗನಾಗಿ ದುಡಿಯಲಿದ್ದೇನೆ ಎಂದ ಶಾಸಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಸಮಾಜದಲ್ಲಿ ಮುಖ್ಯವಾಹಿನಿಗೆ ತೊರಬೇಕು ಹಾಗೂ ರಾಜಕೀಯ ಮತ್ತು ಆರ್ಥಿಕವಾಗಿ ಅಭಿವೃದ್ಧಿ ಹೊಂದ ಬೇಕೆಂದರು.

ಮಣ್ಣಿನ ಮಕ್ಕಳು, ಕಾಯಕನಿಷ್ಠೆ, ಸರಳ ಶಿಸ್ತುಬದ್ಧ ಹಾಗೂ ಗುರು ಹಿರಿಯರ ಮೇಲೆ ಗೌರವ ಇರಿಸಿರುವ ಈ ನಾಮಧಾರಿಗೌಡರ ಸಮುದಾಯ ಈ ಭವನವನ್ನು ನಿರ್ಮಿಸುವಲ್ಲಿ ಹಗಲಿರುಳು ಶ್ರಮಿಸಿ ದುಡಿದ ಹಿರಿಯರಿಗೆ ಸಂಘಟಕರಿಗೆ ನಾನು ಈ ೨೫ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಅಭಿನಂದಿಸುತ್ತೇನೆ ಎಂದರು.
ಮಾಜಿ ಸಚಿವ ಸಾ.ರಾ.ಮಹೇಶ್ ಮಾತನಾಡಿ ನಿಮ್ಮೆಲ್ಲರ ಸಹಕಾರದಿಂದ ೧೫ ವರ್ಷ ಶಾಸಕನಾಗಿ, ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದಾಗ ನಿಮ್ಮ ಸಮುದಾಯಕ್ಕೆ ಸಾಂವಿಧಾನಿಕ ಹುದ್ದೆ ಕೊಡುತ್ತೇವೆ. ಸಮುದಾಯದವರು ನಿವೇಶನ ಕೊಟ್ಟರೆ ೧ ಕೋಟಿ ರೂಪಾಯಿಗಳ ಅನುದಾನವನ್ನು ಶೈಕ್ಷಣಿಕ ಸಂಸ್ಥೆಗೆ ಕೊಡುತ್ತೇನೆ. ಅಲ್ಲದೆ ರಾಜ್ಯ ಸರ್ಕಾರ ನಾಮಧಾರಿಗೌಡ ಸಮುದಾಯವನ್ನು ಒಬಿಸಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಿದರೆ ಕೇಂದ್ರ ಸರ್ಕಾರದಿಂದ ನಾವು ಮಾತನಾಡಿ ಅದನ್ನು ಮಾಡಿಸಿಕೊಂಡು ಬರುತ್ತೇವೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಸಮುದಾಯದ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು, ನಿವೃತ್ತ ಯೋಧರು ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿದ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಕುರಿತು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್, ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್ ಮಾತನಾಡಿದರು. ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮಾಜಿ ಶಾಸಕ ಅಶ್ವಿನ್ ಕುಮಾರ್, ತಾಲೂಕು ಅಖಿಲ ನಾಮಧಾರಿಗೌಡ ಸಂಘದ ಅಧ್ಯಕ್ಷ ಕೆ.ಆರ್.ಅಶೋಕ್ ಕುಮಾರ್, ಉಪಾಧ್ಯಕ್ಷ ಕೆಗ್ಗೆರೆ ಗಿರೀಶ್, ಕಾರ್ಯದರ್ಶಿ ಪುರುಷೋತ್ತಮ, ಖಜಾಂಚಿ ಕೃಷ್ಣೇಗೌಡ, ಜಿಪಂ ಮಾಜಿ ಸದಸ್ಯ ಅಮಿತ್ ವಿ ದೇವರಹಟ್ಟಿ, ತಾಪಂ ಮಾಜಿ ಅಧ್ಯಕ್ಷ ಜಯರಾಮೇಗೌಡ, ಅರ್ಥಶಾಸ್ತ್ರ ಹಿರಿಯ ಉಪನ್ಯಾಸಕ ಡಿ.ಶ್ರೀನಿವಾಸ್, ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ಕಾಂಗ್ರೆಸ್ ಮುಖಂಡ ಕೆ.ಎಸ್.ಸುಮಂತ್, ಅರವಿಂದ್, ಹೊಸಕೊಟೆ ಅಶೋಕ್, ನಾಮದಾರಿ, ಸೇರಿದಂತೆ ಇನ್ನಿತರರು ಇದ್ದರು.

RELATED ARTICLES
- Advertisment -
Google search engine

Most Popular