ಬೆಂಗಳೂರು: ಇತ್ತೀಚೆಗೆ ಕೇಂದ್ರ ಸರ್ಕಾರ ಆಹಾರ ಉತ್ಪನ್ನಗಳ ಮೇಲಿನ ಜಿಎಸ್ಟಿಯನ್ನು ಇಳಿಕೆ ಮಾಡಿದ ಬೆನ್ನಲ್ಲೇ ಇದೀಗ ಕರ್ನಾಟಕ ಹಾಲು ಒಕ್ಕೂಟ ರಾಜ್ಯದ ಜನತೆಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಸೆಪ್ಟೆಂಬರ್ 22 ರಿಂದ ನಂದಿನ ಉತ್ಪನ್ನಗಳ ಬೆಲೆ ಇಳಿಕೆಯಾಗಲಿದೆ.
ನಂದಿನಿ ಹಾಲು, ಮೊಸರು, ತುಪ್ಪ, ಬೆಣ್ಣೆ ಮತ್ತು ಲಸ್ಸಿ ಸೇರಿದಂತೆ ಹಲವು ಉತ್ಪನ್ನಗಳ ದರ ಇಳಿಕೆಯಾಗಿದ್ದು, ಸೋಮವಾರದಿಂದ ಎಂದರೆ ಸೆಪ್ಟೆಂಬರ್ 22ರಿಂದ ಹೊಸ ದರ ಜಾರಿಗೆ ಬರುವ ಸಾಧ್ಯತೆ ಇದೆ. ಈ ಬಗ್ಗೆ ಕೆಎಂಎಫ್ ಅಧಿಕೃತ ಆದೇಶವನ್ನು ಇನ್ನಷ್ಟೇ ನೀಡಬೇಕಿದೆ.
ಜಿಎಸ್ಟಿ ಇಳಿಕೆ ಬೆನ್ನಲ್ಲೇ ಶುಕ್ರವಾರ ಕೆಎಂಎಫ್ ಅಧಿಕಾರಿಗಳು ಸಭೆ ನಡೆಸಿ ಹಾಲು ಉತ್ಪನ್ನಗಳ ದರ ಇಳಿಕೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ಸಭೆಯಲ್ಲಿ ಯಾವ ಉತ್ಪನ್ನಗಳ ದರ ಎಷ್ಟು ಇಳಿಕೆ ಮಾಡಬೇಕು ಎಂಬುದರ ಬಗ್ಗೆ ಚರ್ಚಿಸಲಾಗಿದೆ. ಮೊಸರಿನ ದರ ಲೀಟರ್ಗೆ 4 ರೂ. ಇಳಿಕೆಯಾಗುವ ನಿರೀಕ್ಷೆ ಇದೆ. ತುಪ್ಪ, ಬೆಣ್ಣೆ, ಲಸ್ಸಿ ಸೇರಿ ಹಲವು ಉತ್ಪನ್ನಗಳ ದರ ಕೂಡ ಇಳಿಕೆ ಆಗಲಿದೆ ಎನ್ನಲಾಗಿದೆ.
2017ರಲ್ಲಿ ಹಾಲಿನ ಉತ್ಪನ್ನಗಳ ಮೇಲೆ ಜಿಎಸ್ಟಿ ವಿಧಿಸಲಾಗಿತ್ತು. 2022 ರಲ್ಲಿ ಜಿಎಸ್ಟಿಯನ್ನ 22% ಕ್ಕೆ ಹೆಚ್ಚಿಸಲಾಗಿತ್ತು. ಆದರೆ ಇತ್ತೀಚೆಗೆ ಕೇಂದ್ರ ಸರ್ಕಾರ ಹಾಲಿನ ಉತ್ಪನ್ನಗಳ ಮೇಲಿನ ಸರಕು ಸೇವಾ ತೆರಿಗೆಯನ್ನು 12% ರಿಂದ 5% ಗೆ ಇಳಿಕೆ ಮಾಡಿದೆ.
ಇನ್ನು ದೇಶದಲ್ಲೇ ಅತಿಹೆಚ್ಚು ಹಾಲು ಉತ್ಪಾದಿಸುವ ರಾಜ್ಯಗಳ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿರುವ ಕರ್ನಾಟಕದ ಹಾಲು ಉತ್ಪಾದಕರ ಒಕ್ಕೂಟವಾಗಿರುವ ಕೆಎಂಎಫ್ (ಕರ್ನಾಟಕ ಸಹಕಾರಿ ಹಾಲು ಮಾರಾಟ ಮಹಾಮಂಡಳ) ಸಂಸ್ಥೆಯು, ಹೊಸ ಇತಿಹಾಸ ಬರೆದಿದೆ. ಸೆಪ್ಟೆಂಬರ್ 17 ರಂದು ಒಂದೇ ದಿನ ರಾಜ್ಯಾದ್ಯಂತ 500 ‘ನಂದಿನಿ’ ಮಳಿಗೆಗಳಿಗೆ ಏಕಕಾಲದಲ್ಲಿ ಚಾಲನೆ ನೀಡಲಾಗಿದೆ. ಕಲ್ಯಾಣ ಕರ್ನಾಟಕದ ಪ್ರಮುಖ ನಗರವಾದ ಕಲಬುರಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಹೊಸ 500 ಮಳಿಗೆಗಳಿಗೆ ವಿದ್ಯುಕ್ತವಾಗಿ ಚಾಲನೆ ನೀಡಿದ್ದಾರೆ.
ಉದ್ಘಾಟನೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ಹಾಲು ಉತ್ಪಾದನೆ ಮತ್ತು ಮಾರಾಟಕ್ಕೆ ಪೂರಕ ವಾತಾವರಣವಿದ್ದು, ರಾಜ್ಯ ಸರ್ಕಾರದ ಸಹಕಾರದೊಂದಿಗೆ ನಂದಿನಿ ಬ್ರ್ಯಾಂಡ್ ಅನ್ನು ದೇಶದಲ್ಲೇ ನಂ.1 ಸ್ಥಾನಕ್ಕೆ ತರುವತ್ತ ಕೆಎಂಎಫ್ ಮುಂದಾಗಬೇಕು ಎಂದು ಹೇಳಿದ್ದಾರೆ.