ಮೈಸೂರು: ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ನಂಜನಗೂಡಿನ ನಂಜುಂಡೇಶ್ವರ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು ,1.12 ಕೋಟಿ ರೂ ಸಂಗ್ರಹವಾಗಿದೆ. 51 ಗ್ರಾಂ ಚಿನ್ನ ಹಾಗೂ 1 ಕೆಜಿ 800 ಗ್ರಾಂ ಬೆಳ್ಳಿಯನ್ನು ಭಕ್ತರು ದೇವರಿಗೆ ಕಾಣಿಕೆ ನೀಡಿದ್ದಾರೆ.
ದೇವಾಲಯದ ದಾಸೋಹ ಭವನದಲ್ಲಿ ನಡೆದ ಮಾಸಿಕ ಹುಂಡಿ ಎಣಿಕೆ ಕಾರ್ಯ ವೇಳೆ ದೇಗುಲದ 35 ಹುಂಡಿಗಳನ್ನು ತೆರೆದು ಎಣಿಕೆ ಮಾಡಲಾಗಿದೆ.
1,12,92,056 ರೂ., 51.380 ಗ್ರಾಂ ಚಿನ್ನ, 1 ಕೆಜಿ 800 ಗ್ರಾಂ ಬೆಳ್ಳಿ ಹಾಗೂ 46 ವಿದೇಶಿ ಕರೆನ್ಸಿಗಳು ಪತ್ತೆಯಾಗಿವೆ. ಕೆನರಾ ಬ್ಯಾಂಕ್ ಸಿಬ್ಬಂದಿ ಮಾರ್ಗದರ್ಶನದಲ್ಲಿ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದೆ. ದೇವಾಲಯದ ಇಒ ಜಗದೀಶ್ ಕುಮಾರ್, ಎಇಒ ಸತೀಶ್, ಹಾಗೂ ಸ್ವಸಹಾಯ ಸಂಘಗಳ ಮಹಿಳೆಯರು ಭಾಗಿಯಾಗಿದ್ದರು.
ಇನ್ನು ಇದೇ ವೇಳೆ ಹುಂಡಿಯಲ್ಲಿ ಕೆಲವು ಪತ್ರಗಳು ಕೂಡ ಸಿಕ್ಕಿವೆ. ಭಕ್ತರು ಪತ್ರ ಬರೆದು ದೇವರಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.