ನವದೆಹಲಿ : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದ್ದು, ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಹಣಕಾಸು ವಿನಿಮಯದ ಮಾಹಿತಿಗಳನ್ನು ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಕೆ ಶಿವಕುಮಾರ್ ಅವರಿಗೆ ಮಾಹಿತಿ ಇರಬಹುದು ಎಂಬ ಶಂಕೆಯ ಮೇಲೆ ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ ನ.29ರಂದು ಈ ನೋಟಿಸ್ ಕಳಿಸಿದೆ. ಅದರಲ್ಲಿ, ಡಿ.19ರ ಒಳಗೆ ತನ್ನೆದುರು ಹಾಜರಾಗಿ ವೈಯಕ್ತಿಕ ಹಿನ್ನೆಲೆ, ಕಾಂಗ್ರೆಸ್ ಪಕ್ಷದೊಂದಿಗಿನ ಒಡನಾಟ, ಅವರು ಅಥವಾ ಅವರಿಗೆ ಸೇರಿದ ಸಂಸ್ಥೆಗಳಿಂದ ಯಂಗ್ ಇಂಡಿಯಾಗೆ ವರ್ಗಾವಣೆಯಾದ ಹಣದ ಬಗ್ಗೆ ಮಾಹಿತಿ ನೀಡಲು ನಿರ್ದೇಶಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ವ್ಯವಹಾರಕ್ಕೆ ಸಂಬಂಧಿಸಿದ ಆದಾಯ ತೆರಿಗೆ ದಾಖಲೆ, ಹಣಕಾಸು ಹೇಳಿಕೆ ಮತ್ತು ದೇಣಿಗೆಯ ಪ್ರಮಾಣಪತ್ರಗಳನ್ನೂ ಸಲ್ಲಿಸುವಂತೆ ಸೂಚಿಸಿದ್ದು, ಡಿಸಿಎಂಗೆ ನೋಟಿಸ್ ಜಾರಿ ಆಗುತ್ತಿದ್ದಂತೆ ಕೇಂದ್ರದಲ್ಲಿನ ಆಡಳಿತ ಪಕ್ಷದ ವಿರುದ್ಧ ಅವರ ಆಪ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿಗೆ ಸಹಕಾರ ತೋರದಿದ್ದಕ್ಕೆ ಶಿವಕುಮಾರ್‌ರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಪಕ್ಷದ ನಾಯಕರ ಪೈಕಿ ಅವರನ್ನೇ ಹೆಚ್ಚು ಕಿರುಕಿಳ ನೀಡಲಾಗುತ್ತಿದೆ. ಆದರೆ ಅವರು ಯಾವುದಕ್ಕೂ ಮಣಿಯುವುದಿಲ್ಲ ಎಂದಿದ್ದಾರೆ.
ಈ ಕುರಿತು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು 2014ರ ಜೂನ್ 26ರಂದು ದಾಖಲಿಸಿದ್ದ ಖಾಸಗಿ ದೂರನ್ನು ಪಟಿಯಾಲಾ ಹೌಸ್ ನ್ಯಾಯಾಲಯದ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟರು ಪರಿಗಣನೆಗೆ ತೆಗೆದುಕೊಂಡ ನಂತರ 2021ರಲ್ಲಿ ವಿಚಾರಣೆ ಆರಂಭಿಸಿದ್ದ ಇ.ಡಿ ರಾಹುಲ್ ಮತ್ತು ಸೋನಿಯಾ ಗಾಂಧಿ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು. ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ನ ಸಾವಿರಾರು ಕೋಟಿ ಮೌಲ್ಯದ ಆಸ್ತಿಯನ್ನು ಸ್ವಾಧೀನಕ್ಕೆ ಪಡೆಯುವ ಸಲುವಾಗಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸ್ಯಾಮ್ ಪಿತ್ರೊಡಾ, ಸುಮನ್ ದುಬೆ ಮತ್ತು ಇತರ ಕಾಂಗ್ರೆಸ್ ನಾಯಕರು ಕ್ರಿಮಿನಲ್ ಪಿತೂರಿ ನಡೆಸಿದ್ದಾರೆ.
ಯಂಗ್ ಇಂಡಿಯನ್ ಲಿಮಿಟೆಡ್ ಮೂಲಕ, ₹2,000 ಕೋಟಿ ಮೌಲ್ಯದ ಆಸ್ತಿಯನ್ನು ಸೋನಿಯಾ ಮತ್ತು ರಾಹುಲ್ ಅವರು ಕೇವಲ ₹50 ಲಕ್ಷಕ್ಕೆ ಸ್ವಾಧೀನ ಪಡಿಸಿಕೊಂಡಿದ್ದಾರೆ. ಹಾಗೂ ಕಾಂಗ್ರೆಸ್ ಪಕ್ಷವು ಎಜೆಎಲ್‌ಗೆ ನೀಡಿದ್ದ ₹90.2 ಕೋಟಿ ಸಾಲವನ್ನು 9.02 ಕೋಟಿಯ ಈಕ್ವಿಟಿ ಷೇರುಗಳನ್ನಾಗಿ ಪರಿವರ್ತಿಸಿ ಯಂಗ್ ಇಂಡಿಯನ್‌ಗೆ ವರ್ಗಾಯಿಸಲಾಗಿದೆ ಎಂದು ಇ.ಡಿ. ದೋಷಾರೋಪ ಪಟ್ಟಿಯಲ್ಲಿ ತಿಳಿಸಿದೆ ಎಂದಿದ್ದಾರೆ.



