ಮಡಿಕೇರಿ: ೬೭ ನೇ ರಾಷ್ಟ್ರ ಮಟ್ಟದ ಬಾಲಕಿಯರ ಹಾಕಿ ಪಂದ್ಯಾವಳಿಯು ಜನವರಿ, ೦೩ ರಿಂದ ೦೮ ರವರೆಗೆ ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಕೂಡಿಗೆ, ಪೊನ್ನಂಪೇಟೆ ಮತ್ತು ಸೋಮವಾರಪೇಟೆಯ ಟರ್ಫ್ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದ್ದು, ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ.
ರಾಷ್ಟ್ರ ಮಟ್ಟದ ಬಾಲಕಿಯರ ಹಾಕಿ ಪಂದ್ಯಾವಳಿಗೆ ಆಗಮಿಸುವ ಕ್ರೀಡಾಪಟುಗಳು, ತೀರ್ಪುಗಾರರು ಹಾಗೂ ತರಬೇತಿದಾರರು ಹೀಗೆ ಎಲ್ಲರಿಗೂ ವಸತಿ, ಉಪಹಾರ, ಊಟ, ಬಿಸಿನೀರು, ಶೌಚಾಲಯ ಹೀಗೆ ಪ್ರತಿಯೊಂದನ್ನು ಸಹ ಕಲ್ಪಿಸಬೇಕಿದ್ದು, ಯಾವುದೇ ರೀತಿಯ ವ್ಯತ್ಯಾಸ ಆಗದಂತೆ ಅಗತ್ಯ ಪೂರ್ವ ತಯಾರಿ ಮಾಡಿಕೊಳ್ಳುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸೂಚಿಸಿದರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜೊತೆ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ನಗರಾಭಿವೃದ್ಧಿ ಇಲಾಖೆ, ಪಂಚಾಯತ್ ರಾಜ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೃಷಿ, ತೋಟಗಾರಿಕೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ, ಸೆಸ್ಕ್ ಹೀಗೆ ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ತೊಡಗಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಹೇಳಿದರು.
ಕ್ರೀಡಾಪಟುಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆರಳಲು ವಾಹನ ವ್ಯವಸ್ಥೆ ಮಾಡುವುದು, ಕುಡಿಯುವ ನೀರು ಕಲ್ಪಿಸುವುದು, ಅಗತ್ಯ ಬಸ್ ಸೌಲಭ್ಯ, ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕರಿಗೆ ಸಲಹೆ ಮಾಡಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ರಾಷ್ಟ್ರ ಮಟ್ಟದ ಹಾಕಿ ಪಂದ್ಯಾವಳಿಗೆ ಕ್ರೀಡಾ ಇಲಾಖೆಯಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡಲು ಪತ್ರ ಬರೆಯುವಂತೆ ಜಿಲ್ಲಾಧಿಕಾರಿ ಅವರು ತಿಳಿಸಿದರು. ವಸತಿ, ಆಹಾರ, ಸಾರಿಗೆ, ವೇದಿಕೆ, ಕುಡಿಯುವ ನೀರು, ಶಿಷ್ಠಾಚಾರ, ಸ್ವಾಗತ, ವೈದ್ಯಕೀಯ, ಹೀಗೆ ವಿವಿಧ ಉಪ ಸಮಿತಿಗಳ ಪಟ್ಟಿ ಮಾಡಿ ಕಾರ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ರಾಷ್ಟ್ರ ಮಟ್ಟದ ಬಾಲಕಿಯರ ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸುವ ಕ್ರೀಡಾಪಟುಗಳ ಸಂಖ್ಯೆ, ತರಬೇತಿದಾರರು, ತೀರ್ಪುಗಾರರ ಸಂಖ್ಯೆ, ವಸತಿ ವ್ಯವಸ್ಥೆ ಮತ್ತಿತರ ಬಗ್ಗೆ ಗಮನಹರಿಸಬೇಕು ಎಂದರು.
ವಸತಿ ಶಾಲೆ, ವಿದ್ಯಾರ್ಥಿ ನಿಲಯ ಜೊತೆಗೆ ಕಲ್ಯಾಣ ಮಂಟಪಗಳನ್ನು ಕಾಯ್ದಿರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೆ.ರಾಮರಾಜನ್ ಅವರು ಸಲಹೆ ಮಾಡಿದರು.