ಬೆಂಗಳೂರು : ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿಯಾಗಲು 500 ಕೋಟಿ ರೂಪಾಯಿಗಳನ್ನು ಲಂಚವಾಗಿ ನೀಡಬೇಕು ಎಂದು ಹೇಳುವವರನ್ನು ಮೆಂಟಲ್ ಆಸ್ಪತ್ರೆಗೆ ದಾಖಲಿಸಬೇಕಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಈ ಕುರಿತು ಹೈದರಾಬಾದ್‌ಗೆ ತೆರಳುವ ಮುನ್ನ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಜಾಬ್ ನ ಕಾಂಗ್ರೆಸ್ ಮುಖಂಡರಾದ ನವಜೋತ್ ಸಿಂಗ್ ಸಿಧು ಅವರ ಪತ್ನಿ ನೀಡಿರುವ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆ ನೀಡಿದವರನ್ನು ಯಾವುದಾದರೂ ಒಳ್ಳೆಯ ಮಾನಸಿಕ ಆರೋಗ್ಯ ಚಿಕಿತ್ಸೆ ನೀಡುವ ಆಸ್ಪತ್ರೆಗೆ ದಾಖಲಿಸೋಣ ಎಂದು ಹೇಳಿದ್ದಾರೆ.
ಸದ್ಯಕ್ಕೆ ನಾನು ಗ್ಲೋಬಲ್ ಸಮಿಟ್‌ನಲ್ಲಿ ಭಾಗವಹಿಸಲು ಹೈದರಾಬಾದ್ ಗೆ ತೆರಳುತ್ತಿದ್ದೇನೆ. ಆಗಾಗಿ ಬೆಳಗಾವಿ ಅಧಿವೇಶನದಲ್ಲಿ ಭಾಗವಹಿಸಲು ಇಂದು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಈ ವೇಳೆ ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಉತ್ತರ ನೀಡಬೇಕಾಗಿರುವುದು ಕೇಂದ್ರ ಸರ್ಕಾರ. ಎಲ್ಲದಕ್ಕೂ ರಾಜ್ಯ ಸರ್ಕಾರದ ಮೇಲೆ ದೂರುವ ಬಿಜೆಪಿಯವರಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ಜವಾಬ್ದಾರಿ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಮೆಕ್ಕೆಜೋಳ, ಕಬ್ಬು ಬೆಲೆ ಕುಸಿತವಾದಾಗ ರಾಜ್ಯ ಸರ್ಕಾರ ದುಬಾರಿ ತೀರ್ಮಾನಗಳನ್ನು ತೆಗೆದುಕೊಂಡಿತ್ತು ಕೇಂದ್ರ ಸರ್ಕಾರ ಈವರೆಗೂ ಬಾಯಿ ಬಿಟ್ಟಿಲ್ಲ. ಸಂಸದರೂ ಆಗಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮಾಯಿ ಎಲ್ಲದಕ್ಕೂ ರಾಜ್ಯ ಸರ್ಕಾರವೇ ಕ್ರಮ ಕೈಗೊಳ್ಳಬೇಕು ಎನ್ನುತ್ತಿದ್ದಾರೆ. ಹಾಗಿದ್ದರೆ ಕೇಂದ್ರ ಸರ್ಕಾರದ ಜವಾಬ್ದಾರಿ ಏನು ಎಂದು ಕಿಡಿಕಾರಿದ್ದಾರೆ.
ಇನ್ನೂ ಬಿಜೆಪಿಯ ಸಂಸದರು ಏಕೆ ಮೌನವಾಗಿದ್ದಾರೆ? ಕಬ್ಬು ಖರೀದಿಸುವ ಎಫ್ ಆರ್ ಪಿ ನಿಗದಿ ಮಾಡಬೇಕಿರುವುದು, ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವುದು ಕೇಂದ್ರ ಸರ್ಕಾರ. ಈವರೆಗೂ ಈ ಕುರಿತು ಏಕೆ ನಿರ್ಧಾರ ತೆಗೆದುಕೊಂಡಿಲ್ಲ? ಕೇಂದ್ರ ತೀರ್ಮಾನ ತೆಗೆದುಕೊಂಡರೆ ಅದರಂತೆ ಪರಿಹಾರ ಪಾವತಿಸಲು ರಾಜ್ಯ ಸರ್ಕಾರ ಸಿದ್ಧವಿದೆ. ಬಸವರಾಜ್ ಬೊಮಾಯಿ ಸೇರಿದಂತೆ ಬಿಜೆಪಿಯ ಸಂಸದರು ಸಂಸತ್ ನಲ್ಲಿ ಈ ಬಗ್ಗೆ ಧ್ವನಿ ಎತ್ತಿಲ್ಲ, ಕೇಂದ್ರ ಕೃಷಿ ಸಚಿವರು ಅಥವಾ ಪ್ರಧಾನಿ ಅವರನ್ನು ಭೇಟಿ ಮಾಡಿಲ್ಲ ಏಕೆ? ಎಂದು ಪ್ರಶ್ನಿಸಿದರು. ನೀರಾವರಿ ಯೋಜನೆಗಳಲ್ಲಿ ನಾವು ಇತಿಹಾಸ ನಿರ್ಮಿಸಿದ್ದೇವೆ. ಈ ಹಿಂದೆ ಯಾವ ಸರ್ಕಾರವೂ ನಮ್ಮಂತೆ ಅಭಿವೃದ್ಧಿಯ ಕೆಲಸಗಳನ್ನು ಮಾಡಿಲ್ಲ. ಇದರ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪಿಸಲಿ, ಜಲ ಸಂಪನ್ಮೂಲ ಇಲಾಖೆಯ ಅಭಿವೃದ್ಧಿ ಬಗ್ಗೆ ತೆಗೆದುಕೊಂಡ ತೀರ್ಮಾನಗಳನ್ನು ವಿವರಿಸುತ್ತೇನೆ ಎಂದಯ ಹೇಳಿದ್ದಾರೆ.



