ಧಾರವಾಡ: ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣದ ಆರೋಪಿ ಫಯಾಜ್ ಜಾಮೀನು ಅರ್ಜಿಯನ್ನು ಧಾರವಾಡ ಹೈಕೋರ್ಟ್ ವಜಾ ಮಾಡಿದೆ.
ಜಿಲ್ಲಾ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ: 2024ರ ಏಪ್ರಿಲ್ 18ರಂದು ನಡೆದಿದ್ದ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಫಯಾಜ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನ ಹುಬ್ಬಳ್ಳಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಜಾ ಮಾಡಿತ್ತು. ಈ ಬಗ್ಗೆ ಪ್ರಶ್ನೆ ಮಾಡಿ ಧಾರವಾಡ ಹೈಕೋರ್ಟ್‌ನಲ್ಲಿ ಫಯಾಜ್ ಅರ್ಜಿ ಸಲ್ಲಿಸಿದ್ದ. ಈ ಕೋರ್ಟ್ ಸಹ ಫಯಾಜ್ ಜಾಮೀನು ಅರ್ಜಿಯನ್ನ ವಜಾ ಮಾಡಿದೆ. ಹೈಕೋರ್ಟ್‌ನಲ್ಲಿ ಸಹ ಅರ್ಜಿ ವಜಾ ಆಗಿರುವ ಕಾರಣದಿಂದ ಆರೋಪಿಗೆ ಜೈಲು ಫಿಕ್ಸ್ ಆಗಿದೆ.
ದರ್ಶನ್ ಥರಾ ನನಗೂ ಬೇಲ್ ಕೊಡಿ ಎಂದಿದ್ದ ಆರೋಪಿ ಫಯಾಜ್: ಜಾಮೀನಿಗಾಗಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಆರೋಪಿ ಫಯಾಜ್, ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ಗೆ ಹೇಗೆ ಜಾಮೀನು ನೀಡಲಾಗಿದೆಯೋ ಹಾಗೇ ನನಗೂ ನೀಡಿ ಎಂದು ಬೇಡಿಕೆ ಇಟ್ಟಿದ್ದ. ಫಯಾಜ್ ಮನವಿ ಬಗ್ಗೆ ಕೊಲೆಯಾದ ನೇಹಾ ತಂದೆ ನಿರಂಜನ್ ಅಸಮಾಧಾನ ಹೊರಹಾಕಿದ್ದರು. ದರ್ಶನ್ ತಮ್ಮ ನಟನೆ ಮತ್ತು ಒಳ್ಳೆಯ ಕಾರ್ಯದಿಂದ ಜನರಿಗೆ ಮಾದರಿ ಆಗಬೇಕಿತ್ತು. ಆದರೆ ಹತ್ಯೆ ಪ್ರಕರಣದಲ್ಲಿ ಇತರೇ ಆರೋಪಿಗಳಿಗೆ ಮಾದರಿಯಾಗಿದ್ದು ನಿಜಕ್ಕೂ ನೋವು ತಂದಿದೆ. ನನ್ನ ಮಗಳಿಗೆ ಆದ ಅನ್ಯಾಯ ಯಾರಿಗೂ ಆಗಬಾರದು. ನನ್ನ ಮಗಳಿಗೆ ನ್ಯಾಯ ಸಿಗಬೇಕು ಎಂದು ಕಣ್ಣೀರಿಟ್ಟಿದ್ದರು. ನಾವು ಮಗಳನ್ನು ಕಳೆದುಕೊಂಡ ದುಃಖದಲ್ಲಿದ್ದರೆ ಆರೋಪಿ ಜೈಲಿನಲ್ಲಿ ಆನಂದವಾಗಿ ಕಾಲ ಕಳೆಯುತ್ತಿದ್ದಾನೆಂದು ನೇಹಾ ಪೋಷಕರು ಕಿಡಿಕಾರಿದ್ದಾರೆ.
ಏನಿದು ಪ್ರಕರಣ? 2024 ರ ಏಪ್ರಿಲ್ 18 ರಂದು ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ 24 ವರ್ಷದ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಬರ್ಬರ ಹತ್ಯೆ ನಡೆದಿತ್ತು. 10 ಕ್ಕೂ ಹೆಚ್ಚು ಬಾರಿ ಬರ್ಬರವಾಗಿ ಇರಿದು ಕೊಲೆ ಮಾಡಲಾಗಿತ್ತು. ಈ ಪ್ರಕರಣದ ಆರೋಪಿ ಬೆಳಗಾವಿ ಜಿಲ್ಲೆಯ ಫಯಾಜ್ ಕೊಂಡುನಾಯ್ಕ (24) ಎಂಬಾತನನ್ನು ಬಂಧಿಸಲಾಗಿತ್ತು. ಪ್ರಕರಣವು ರಾಜ್ಯಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಘಟನೆ ಖಂಡಿಸಿ ಸಾವಿರಾರು ವಿದ್ಯಾರ್ಥಿಗಳು ಮತ್ತು ನಾಗರಿಕರು ಪ್ರತಿಭಟನೆ ನಡೆಸಿದ್ದರು.
ಫಯಾಜ್ ಸಸ್ಪೆಂಡ್..!: ನೇಹಾ ಕೊಲೆ ಪ್ರಕರಣ ಬಳಿಕ ಆರೋಪಿ ಫಯಾಜ್ ನನ್ನು ಪಿಸಿ ಜಾಬಿನ್ ಕಾಲೇಜ್‌ನಿಂದ ಅಮಾನತು ಮಾಡಲಾಗಿದೆ. ಅಲ್ಲದೇ ಯಾವ ಪರೀಕ್ಷೆಗೂ ಆತನಿಗೆ ಅವಕಾಶ ನೀಡದಿರಲು ನಿರ್ಧರಿಸಿದೆ.
ಪಿಸಿ ಜಾಬಿನ್ ಕಾಲೇಜ್‌ನಲ್ಲಿ ಫಯಾಜ್ 2022 ರಲ್ಲಿ BCA ವ್ಯಾಸಂಗ ಮಾಡುತಿದ್ದ. 5 ಮತ್ತು 6ನೇ ಸೆಮಿಸ್ಟರ್‌ನಲ್ಲಿ ಕೆಲ ವಿಷಯಗಳಲ್ಲಿ ಫೇಲ್ ಕೂಡ ಆಗಿದ್ದ. ಇನ್ಮುಂದೆ ಫಯಾಜ್ ಕಾಲೇಜ್‌ಗೆ ಬರಲು ಬಿಡಲ್ಲ ಎಂದು ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.