Saturday, July 11, 2026
Google search engine

Homeರಾಜ್ಯಶಾಶ್ವತ ನಿವಾಸ ಪ್ರಮಾಣಪತ್ರಕ್ಕೆ ಹೊಸ ವ್ಯವಸ್ಥೆ: ಬಿಜೆಪಿ ಟೀಕೆಗೆ ಡಿಸಿಎಂ ಪರಮೇಶ್ವರ್ ತಿರುಗೇಟು, 7 ದಿನದಲ್ಲಿ...

ಶಾಶ್ವತ ನಿವಾಸ ಪ್ರಮಾಣಪತ್ರಕ್ಕೆ ಹೊಸ ವ್ಯವಸ್ಥೆ: ಬಿಜೆಪಿ ಟೀಕೆಗೆ ಡಿಸಿಎಂ ಪರಮೇಶ್ವರ್ ತಿರುಗೇಟು, 7 ದಿನದಲ್ಲಿ PRC ವಿತರಣೆ

ಬೆಂಗಳೂರು : ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಾಶ್ವತ ನಿವಾಸ ಪ್ರಮಾಣಪತ್ರ (PRC) ವ್ಯವಸ್ಥೆ ಕುರಿತು ವ್ಯಕ್ತವಾಗಿರುವ ಬಿಜೆಪಿ ಟೀಕೆಗಳನ್ನು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಳ್ಳಿಹಾಕಿದ್ದು, ಸರ್ಕಾರದ ಕ್ರಮವು ಸಂಪೂರ್ಣ ಕಾನೂನುಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಾತಿ ಪ್ರಮಾಣಪತ್ರಗಳನ್ನು ನೀಡುವುದು ಮೊದಲಿನಿಂದಲೂ ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದ್ದು, ಅದೇ ರೀತಿಯಲ್ಲಿ ಅಗತ್ಯ ದಾಖಲೆಗಳ ಪರಿಶೀಲನೆಯ ಬಳಿಕ ಶಾಶ್ವತ ನಿವಾಸ ಪ್ರಮಾಣಪತ್ರಗಳನ್ನು ವಿತರಿಸಲಾಗುತ್ತಿದೆ. ಆಧಾರ್ ಸೇರಿದಂತೆ ಕಾನೂನುಬದ್ಧ ದಾಖಲೆಗಳನ್ನು ಪರಿಶೀಲಿಸಿದ ನಂತರವೇ ಪ್ರಮಾಣಪತ್ರ ನೀಡಲಾಗುತ್ತಿದ್ದು, ಯಾವುದೇ ನಿಯಮ ಉಲ್ಲಂಘನೆ ನಡೆದಿಲ್ಲ ಎಂದು ತಿಳಿಸಿದರು.

ಇನ್ನೂ ಚುನಾವಣಾ ಆಯೋಗದ ಎಸ್‌ಐಆರ್‌ಗೆ ನಿಗದಿಪಡಿಸಿರುವ ಮಾನದಂಡಗಳಲ್ಲಿ ವಾಸಸ್ಥಳದ ಅಂಶವೂ ಸೇರಿದ್ದು, ರಾಜ್ಯ ಸರ್ಕಾರ ತನ್ನ ಅಧಿಕಾರದ ವ್ಯಾಪ್ತಿಯಲ್ಲಿಯೇ ಈ ನಿರ್ಧಾರ ಕೈಗೊಂಡಿದೆ. ಹಿಂದೆ ಜಾತಿ ಪ್ರಮಾಣಪತ್ರಗಳನ್ನು ನೀಡುತ್ತಿದ್ದ ಮಾದರಿಯಲ್ಲೇ ಈಗ ನಿವಾಸ ಪ್ರಮಾಣಪತ್ರಗಳನ್ನೂ ನೀಡಲಾಗುತ್ತಿದೆ ಎಂದು ಡಿಸಿಎಂ ವಿವರಿಸಿದರು.

ಇದೇ ವೇಳೆ ಈ ಹೊಸ ವ್ಯವಸ್ಥೆಯಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದ ಅವರು, ಇದುವರೆಗೆ ಸೂಕ್ತ ದಾಖಲೆಗಳ ಕೊರತೆಯಿಂದ ಸುಮಾರು 50 ರಿಂದ 60 ಸಾವಿರ ವಿದ್ಯಾರ್ಥಿಗಳು ಸಿಇಟಿ ಸೇರಿದಂತೆ ವಿವಿಧ ಪ್ರವೇಶ ಪ್ರಕ್ರಿಯೆಗಳಲ್ಲಿ ತೊಂದರೆ ಅನುಭವಿಸುತ್ತಿದ್ದರು. ಈಗ ನಿವಾಸ ಪ್ರಮಾಣಪತ್ರದಲ್ಲೇ ಅಗತ್ಯ ವಿವರಗಳು ಲಭ್ಯವಾಗುವುದರಿಂದ ಉನ್ನತ ಶಿಕ್ಷಣ, ವಿದ್ಯಾರ್ಥಿವೇತನ ಹಾಗೂ ಇತರೆ ಸರ್ಕಾರಿ ಪ್ರಕ್ರಿಯೆಗಳು ಸುಲಭವಾಗಲಿವೆ ಎಂದು ಹೇಳಿದರು.

ಇದರ ನಡುವೆ, ಕಂದಾಯ ಇಲಾಖೆ ಶಾಶ್ವತ ನಿವಾಸ ಪ್ರಮಾಣಪತ್ರ ವಿತರಣೆಗೆ ಹೊಸ ಸಮಗ್ರ ಮಾರ್ಗಸೂಚಿಯನ್ನು ಜಾರಿಗೆ ತಂದಿದ್ದು, ಅಪರ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಅವರ ನೇತೃತ್ವದಲ್ಲಿ ಪ್ರಕಟಿಸಿರುವ ಈ ಮಾರ್ಗಸೂಚಿಯ ಉದ್ದೇಶ, ನಾಗರಿಕರಿಗೆ ಸರಳ, ಪಾರದರ್ಶಕ ಹಾಗೂ ವಿಳಂಬರಹಿತ ಸೇವೆ ಒದಗಿಸುವುದಾಗಿದೆ.

ಹೊಸ ಆದೇಶದಂತೆ, ಈ ಸೇವೆಯನ್ನು ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ–2011ರ ವ್ಯಾಪ್ತಿಗೆ ತರಲಾಗಿದ್ದು, ಅರ್ಜಿದಾರರು ಕೇವಲ ಏಳು ದಿನಗಳೊಳಗೆ ಶಾಶ್ವತ ನಿವಾಸ ಪ್ರಮಾಣಪತ್ರವನ್ನು ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಶಿಕ್ಷಣ, ವಿದ್ಯಾರ್ಥಿವೇತನ, ಉದ್ಯೋಗ ನೇಮಕಾತಿ ಹಾಗೂ ವಿವಿಧ ಕಲ್ಯಾಣ ಯೋಜನೆಗಳಿಗೆ ಅಗತ್ಯವಿರುವ ಈ ದಾಖಲೆಯನ್ನು ಸಮಯಮಿತಿಯೊಳಗೆ ನೀಡುವ ಮೂಲಕ ಸಾರ್ವಜನಿಕರ ಓಡಾಟವನ್ನು ಕಡಿಮೆಗೊಳಿಸುವುದು ಸರ್ಕಾರದ ಉದ್ದೇಶವಾಗಿದೆ.

RELATED ARTICLES
- Advertisment -
Google search engine

Most Popular