ಮಂಗಳೂರು(ದಕ್ಷಿಣ ಕನ್ನಡ): ಕರಾವಳಿಯ ಐತಿಹಾಸಿಕ ಕ್ರೀಡೆ ಕಂಬಳಕ್ಕೂ ಬಂತು ಹೊಸ ತಂತ್ರಜ್ಞಾನ. ಇದುವರೆಗೂ ಕಂಡು ಬಾರದ ಟೆಕ್ನಾಲಜಿ ಐಕಳಬಾವ ಕಾಂತಬಾರೆ ಬೂದಬಾರೆ ಕಂಬಳದಲ್ಲಿ ಕಂಡು ಬಂತು.
ಈ ಮೂಲಕ ನಿಖರ ಫಲಿತಾಂಶ ಹಾಗೂ ಕಂಬಳ ಕ್ರೀಡೆಯನ್ನ ತ್ವರಿತವಾಗಿ ಮುಗಿಸುವ ಆಲೋಚನೆಯೂ ಆಯೋಜಕರ ಮುಂದಿದೆ. ಹಾಗಿದ್ರೆ ಹೇಗಿದೆ ಈ ಹೊಸ ಟೆಕ್ನಾಲಜಿ ಅನ್ನೋದನ್ನ ನೋಡೋಣ ಬನ್ನಿ. ಯೆಸ್. ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯ ಐಕಳದಲ್ಲಿ ನಡೆದ ಕಾಂತಬಾರೆ ಬೂದಬಾರೆ ಕಂಬಳವು ಹೊಸ ತಂತ್ರಜ್ಞಾನದ ಅಳವಡಿಕೆಗೆ ಸಾಕ್ಷಿಯಾಯಿತು. ಬೆಳಪು ದೇವಿಪ್ರಸಾದ್ ಶೆಟ್ಟಿ ಅವರ ನೇತೃತ್ವದಲ್ಲಿ ನಡೆಯುವ ಐಕಳ ಕಂಬಳದಲ್ಲಿ ಇದನ್ನ ಮೊದಲ ಬಾರಿಗೆ ಪ್ರಯೋಗಿಸಲಾಯಿತು. ಸ್ವಯಂಚಾಲಿತ ಸಮಯ ಗೇಟ್ ವ್ಯವಸ್ಥೆ ಹಾಗೂ ಫೋಟೊ ಫಿನಿಶ್ ಫಲಿತಾಂಶದ ತಂತ್ರಜ್ಞಾನವೇ ಈ ಹೊಸ ಪ್ರಯೋಗ.
ವಿವಿಧ ವಿಭಾಗದ ಕೋಣಗಳಿಗೆ ಬೇರೆ ಬೇರೆ ಸಮಯ ನಿಗದಿ ಮಾಡಲಾಗಿದ್ದು, ನಿಗದಿತ ಸಮಯದಲ್ಲಿ ಒಂದು ವೇಳೆ ಕೋಣ ಬಿಡದಿದ್ದರೆ ನೆಟ್ ಮಾದರಿಯ ಗೇಟ್ ಬೀಳುತ್ತದೆ. ಇದಾದ ನೂರು ಸೆಕೆಂಡ್ ನಿಂದ ಇಳಿಕೆ ಕ್ರಮದಲ್ಲಿ 10 ಸೆಕೆಂಡ್ ವರೆಗೆ ರೆಡ್ ಲೈಟ್, ಹತ್ತು ಸೆಕೆಂಡ್‌ನಿಂದ ಒಂದು ಸೆಕೆಂಡ್ ವರೆಗೆ ಹಳದಿ ಲೈಟ್, ನಂತರ ಝಿರೋ ಸೆಕೆಂಡ್ ಆದಾಗ ಹಸಿರು ಲೈಟ್ ಉರಿಯಲಿದೆ. ಈ ಅವಧಿಯಲ್ಲಿ ಕೋಣವನ್ನು ಬಿಡಬೇಕು. ಇಲ್ಲದಿದ್ದರೆ ಆ ಕೋಣವನ್ನು ಸ್ಪರ್ಧೆಯಿಂದ ಹೊರಗಿಡಲಾಗುತ್ತದೆ.
ಇನ್ನು ಮತ್ತೊಂದು ಹೊಸ ತಂತ್ರಜ್ಞಾನ ಫೋಟೋ ಫಿನಿಶಿಂಗ್ ಕಂಬಳದಲ್ಲಿ ಆಳವಡಿಸಲಾಗಿದೆ. ಕೋಣಗಳ ಮುಖ ಸ್ಕ್ಯಾನ್ ಮೇಲೆ ನಿಖರ ಫಲಿತಾಂಶವನ್ನು ನೀಡಲಿದೆ. ಐಕಳಬಾವ ಕಂಬಳದಲ್ಲಿ ಹೊಸ ತಂತ್ರಜ್ಞಾನ ಪ್ರಯೋಗವಾಗಿದ್ದು, ಇದರ ಸಾಧಕ ಬಾಧಕಗಳನ್ನು ನೋಡಿಕೊಂಡು ಮುಂದಿನ ಕಂಬಳದಲ್ಲಿ ಬಳಸಲಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.