ರಾಮನಗರ : ಬಿಡದಿ ಟೌನ್‌ಶಿಪ್ ಯೋಜನೆ ಜಟಾಪಟಿ ಜೋರಾಗಿದೆ. ಅದರಲ್ಲೂ ಸಿಎಂ ಡಿಕೆ ಶಿವಕುಮಾರ್ ಮತ್ತು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಮಧ್ಯೆ ವಾಗ್ವಾದ ತಾರಕಕ್ಕೇರಿದೆ. ರೈತರ ಸಮ್ಮುಖದಲ್ಲೇ ಚರ್ಚೆ ಮಾಡೋಣ ಬೈರಮಂಗಲಕ್ಕೆ ಬನ್ನಿ ಅಂತಾ ಹೆಚ್‌ಡಿ ಕುಮಾರಸ್ವಾಮಿ, ಡಿಕೆ ಶಿವಕುಮಾರ್ಗೆ ಸವಾಲು ಹಾಕಿದ್ದರು. ಅದರಂತೆ ಇಂದು ಬೈರಮಂಗಲಕ್ಕೆ ಎಂಟ್ರಿ ಕೊಟ್ಟ ಕುಮಾರಸ್ವಾಮಿ ವಿರುದ್ಧ ಬಿಡದಿ ಟೌನ್‌ಶಿಪ್ ಪರ ಪ್ರತಿಭಟನಾನಿರತ ರೈತರು ಆಕ್ರೋಶ ವ್ಯಕ್ತಪಡಿಸಿದರು. ಹಣ ಕೊಟ್ಟು ಹೊರಗಡೆಯಿಂದ ಜನರನ್ನು ಕರೆಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಬಿಡದಿಗೆ ಬನ್ನಿ ರೈತರ ಜೊತೆ ಚರ್ಚಿಸೋಣ ಅಂತಾ ತೊಡೆ ತಟ್ಟಿದ್ದ ಹೆಚ್.ಡಿ ಕುಮಾರಸ್ವಾಮಿ ಇಂದು ಬೈರಮಂಗಲಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆ ಮೂಲಕ ಟೌನ್‌ಶಿಪ್ ವಿರುದ್ಧ ರೈತರ ಪ್ರತಿಭಟನೆಯಲ್ಲಿ ಭಾಗಿಯಾದರು. ಎಂಟ್ರಿ ಕೊಡುತ್ತಲೇ ವೇದಿಕೆ ಮೇಲೆ ಸಿಎಂ ಡಿಕೆ ಶಿವಕುಮಾರ್ಗೆ ಆಸನ ಕಾಯ್ದಿರಿಸಿ ಮತ್ತೆ ಸವಾಲ್ ಎಸೆದರು. ರೈತರನ್ನ ಬಿಟ್ಟು ಚರ್ಚೆ ಮಾಡುವುದಕ್ಕೆ ನಾನು ಸಿದ್ಧ ಇಲ್ಲ ಅಂತಾ ಕಿಡಿಕಾರಿದರು.
ಇನ್ನು ಹೆಚ್‌ಡಿ ಕುಮಾರಸ್ವಾಮಿ ಭೇಟೆ ಹಿನ್ನೆಲೆ ಟೌನ್‌ಶಿಪ್ ಪರ ಪ್ರತಿಭಟನಾನಿರತ ರೈತರಿಂದ ಹೈಡ್ರಾಮ ಕೂಡ ನಡೆದಿದೆ. ಹೆಚ್‌ಡಿ ಕುಮಾರಸ್ವಾಮಿ ಹಣ ಕೊಟ್ಟು ಹೊರಗಡೆಯಿಂದ ಜನರನ್ನು ಕರೆಸಿದ್ದಾರೆ. ಆ ಮೂಲಕ ಗೂಂಡಾಗಿರಿ ಮಾಡುತ್ತಿದ್ದಾರೆ. ನಮ್ಮ ಬಳಿ ಆರ್ಟಿಸಿ ಇದೆ, ಪಹಣಿ ಇದೆ, ನೀವ್ಯಾಕೆ ಬಂದಿದ್ದೀರಿ ಎಂದು ಹೆಗಲ ಮೇಲೆ ಹಸಿರು ಟವೆಲ್ ಹಾಕಿಕೊಂಡು ಬಂದವರಿಗೆ ಟೌನ್‌ಶಿಪ್ ಪರ ಪ್ರತಿಭಟನಾನಿರತ ರೈತರು ಆಕ್ರೋಶ ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೆ ಪ್ರತಿಭಟನಾ ಸ್ಥಳಕ್ಕೆ ಬರುತ್ತಿದ್ದವರನ್ನು ರೈತರು ತಡೆದು ಕಳುಹಿಸಿದ್ದಾರೆ.
ಕುಮಾರಸ್ವಾಮಿ ಬಳಿ ಹೋಗಲು ಅವಕಾಶ ಕೊಡಿ ಎಂದು ಟೌನ್‌ಶಿಪ್ ಪರ ಪ್ರತಿಭಟನಾನಿರತ ರೈತರು ಒತ್ತಾಯಿಸಿದರು. ಅವರ ಬಳಿ ತೆರಳಲು ಮುಂದಾದ ರೈತರನ್ನು ಪೊಲೀಸರು ತಡೆದರು. ಜೆಡಿಎಸ್ನವರು ಪ್ರಚೋದನಕಾರಿ ಭಾಷಣ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಮಂಜುನಾಥ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಧೈರ್ಯವಿದ್ದರೆ ಇಲ್ಲಿಗೆ ಬಂದು ಮಾತನಾಡಿ. ಅವರನ್ನು ಆಚೆ ಕಳಿಸಿ ಅಥವಾ ನಮ್ಮನ್ನು ಅಲ್ಲಿಗೆ ಹೋಗಲು ಬಿಡಿ ಎಂದು ಒತ್ತಾಯಿಸಿದರು. ಈ ವೇಳೆ ಪ್ರತಿಭಟನಾನಿರತ ರೈತರನ್ನು ತಡೆಯಲು ಪೊಲೀಸರು ಹರಸಾಹಸ ಪಟ್ಟರು.
ಇನ್ನು ಪ್ರತಿಭಟನಾ ಸ್ಥಳಕ್ಕೆ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಕರೆತರಲು ಟೌನ್‌ಶಿಪ್ ಯೋಜನೆಯ ಪರ ಇರುವ ರೈತರು ಮನವಿ ಮಾಡಿದರು. ಅವರನ್ನು ನಮ್ಮ ಬಳಿ ಕರೆದುಕೊಂಡು ಬನ್ನಿ. ನಾವು ಶಾಂತಿಯಿಂದ 10 ಮುಖಂಡರು ಮಾತನಾಡುತ್ತೇವೆ ಎಂದರು. ಈ ವೇಳೆ ಹೆಚ್‌ಡಿ ಕುಮಾರಸ್ವಾಮಿಯನ್ನ ಕೇಳಿಕೊಂಡು ಬರುತ್ತೇವೆ ಎಂದು ಪೊಲೀಸರು ತಿಳಿಸಿದರು. ಪೊಲೀಸರು ಬರುವವರೆಗೆ ಶಾಂತಿಯಿಂದ ಇರ್ತೀವಿ. ಒಂದು ವೇಳೆ ಅವರು ಇಲ್ಲಿಗೆ ಬರಲು ಒಪ್ಪದಿದ್ದರೆ ಮುತ್ತಿಗೆ ಹಾಕುತ್ತೇವೆ. ಪೊಲೀಸರು ಗೋಲಿಬಾರ್ ಮಾಡಲಿ ಎಂದು ಹೇಳಿದ್ದಾರು.



