ಬೆಂಗಳೂರು: ಯಾದಗಿರಿ ಜಿಲ್ಲೆಯ ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಅವರು ಚಳಿಗಾಲದ ಅಧಿವೇಶನದಲ್ಲಿ ಯಾವುದೇ ಭತ್ಯೆ ಸ್ವೀಕರಿಸುವುದಿಲ್ಲ ಎಂದು ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಪತ್ರ ಬರೆದಿದ್ದಾರೆ.
ಹೊರಗಿನಿಂದ ಆಹಾರ ವಸ್ತುಗಳನ್ನು ತಂದು ಬಳಕೆ ಮಾಡಲು ಅನುಮತಿ ನೀಡುವಂತೆ ಅವರು ಮನವಿ ಮಾಡಿದ್ದಾರೆ. ಕಳೆದ ಅಧಿವೇಶನದಲ್ಲಿಯೂ ಭತ್ಯೆ ಪಡೆಯದಿದ್ದ ಶರಣಗೌಡ ಕಂದಕೂರು, ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಚರ್ಚೆಗೆ ಕೋಟ್ಯಾಂತರ ರೂಪಾಯಿ ವೆಚ್ಚವಾಗುತ್ತಿದ್ದರೂ ಫಲಿತಾಂಶ ಕಾಣಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಳೆ ಹಾಗೂ ಪ್ರವಾಹದಿಂದ ಜನತೆ ಸಂಕಷ್ಟದಲ್ಲಿದ್ದರೂ ಪರಿಹಾರ ದೊರೆಯದಿರುವುದು ವಿಷಾದನೀಯ ಎಂದು ಹೇಳಿದ್ದಾರೆ.
ಸಭೆಯಲ್ಲಿ ಕೇವಲ ಮಾತುಗಳು ನಡೆಯುತ್ತಿವೆ, ಪರಿಣಾಮಕಾರಿ ಕ್ರಮಗಳಿಲ್ಲದೆ ಸಾರ್ವಜನಿಕ ಹಣ ವ್ಯಯವಾಗುತ್ತಿದೆ ಎಂದು ಟೀಕಿಸಿದ ಅವರು, ಸರ್ಕಾರದ ಭತ್ಯೆ ಸ್ವೀಕರಿಸದೇ ನಿಷ್ಠೆಯಿಂದ ಸೇವೆ ಸಲ್ಲಿಸಲು ತೀರ್ಮಾನಿಸಿರುವುದಾಗಿ ತಿಳಿಸಿದ್ದಾರೆ.



