ಮೈಸೂರು: ಮೈಸೂರು ಜಿಲ್ಲೆ ಸೇರಿದಂತೆ ರಾಜ್ಯ ರಾಜಕೀಯದಲ್ಲಿ ಪ್ರಭಾವಶಾಲಿ ನಾಯಕನಾಗಿ ಹೊರಹೊಮ್ಮಿರುವ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ತಮ್ಮ ಭವಿಷ್ಯ ರಾಜಕೀಯದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. “ನಾನು ಕ್ಷೇತ್ರದ ಜನರ ಅಭಿಪ್ರಾಯ ಕೇಳಿಯೇ ಮುಂದಿನ ತೀರ್ಮಾನಗಳನ್ನು ಕೈಗೊಳ್ಳುತ್ತೇನೆ,” ಎಂದು ಮಾಧ್ಯಮದವರೊಂದಿಗೆ ಮಾತನಾಡುತ್ತಾ ತಿಳಿಸಿದರು.
ಜೆಡಿಎಸ್ನಿಂದ ಅತೃಪ್ತಿ, ಆದರೆ ಪಕ್ಷ ಬದಲಾವಣೆಗೆ ಇಚ್ಛೆ ಇಲ್ಲ: ಜೆಡಿಎಸ್‌ನಿಂದ ದೂರ ಉಳಿದಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ನಾನು ಈ ಹಿಂದೆ ಸಿದ್ದರಾಮಯ್ಯನಂತಹ ಬಲಿಷ್ಠ ನಾಯಕರ ಎದುರು ಗೆದ್ದಿದ್ದೇನೆ. ಅರ್ಧದಲ್ಲಿ ಜೆಡಿಎಸ್ ಬಿಟ್ಟು ಬೇರೆ ಪಕ್ಷ ಸೇರೋ ವ್ಯಕ್ತಿ ನಾನು ಅಲ್ಲ. ನಾನು ಜೀವದಲ್ಲಿ ಭ್ರಷ್ಟಾಚಾರ ಮಾಡಿಲ್ಲ, ಪಕ್ಷಾಂತರ ಕೂಡ ಮಾಡಿಲ್ಲ,” ಎಂದು ಧ್ವನಿತವಾಗಿ ಹೇಳಿದರು.
ಅವರು ತಮ್ಮ ವಿರುದ್ಧ ಯಾರಿಗೂ ಪಕ್ಷಾಂತರ ಆರೋಪ ಮಾಡಲು ತಾಕತ್ತು ಇಲ್ಲವೆಂದು ಅಭಿಪ್ರಾಯಪಟ್ಟರು. ಮುಂದಿನ ಮೂರು ವರ್ಷಗಳವರೆಗೆ ತಮ್ಮ ಶಾಸಕರ ಅವಧಿ ಮುಂದುವರಿಯುತ್ತಿದ್ದು, ಕ್ಷೇತ್ರದ ಜನರ ಸೇವೆಯಲ್ಲಿ ತೊಡಗಿರುತ್ತೇನೆ ಎಂದರು.
ಕೇಂದ್ರದಲ್ಲಿ ಕಡೆಗಣನೆ, ನಿಖಿಲ್ ಬಗ್ಗೆ ಮಾತು: “ನನ್ನನ್ನು ಜೆಡಿಎಸ್‌ನಲ್ಲಿ ಕಡೆಗಣಿಸಿದ್ದಾರೆ. ಕೋರ್ ಕಮಿಟಿ ಅಧ್ಯಕ್ಷರಾಗಿದ್ದರೂ, ನನಗೆ ವಿರೋಧ ಪಕ್ಷದ ಸ್ಥಾನ ನೀಡಲಾಗಿಲ್ಲ. ಸುರೇಶ್ ಬಾಬುಗೆ ಅಧಿಕಾರ ಕೊಟ್ಟು ನನ್ನನ್ನು ಕಡೆಗಣಿಸಿದ್ದಾರೆ,” ಎಂಬ ಅಸಮಾಧಾನ ವ್ಯಕ್ತಪಡಿಸಿದರು.
ನಿಖಿಲ್ ಕುಮಾರಸ್ವಾಮಿ ಬಗ್ಗೆ ಮಾತನಾಡುತ್ತಾ, “ಅವರು ಒಬ್ಬ ಜನಪ್ರಿಯ ನಟ, ಆದರೆ ಮೂರು ಚುನಾವಣೆಯಲ್ಲಿ ಸೋತಿದ್ದಾರೆ. ಇದೀಗ ಅವರಿಗೆ ರಾಜಕೀಯದ ಅನುಭವ ಬಂದಿದೆ. ದೇವೇಗೌಡರು ಕಟ್ಟಿದ ಪಕ್ಷವನ್ನು ಸದೃಢವಾಗಿ ಮುನ್ನಡೆಸುವ ಸಾಮರ್ಥ್ಯ ನಿಖಿಲ್‌ಗೆ ಇದೆ,” ಎಂದು ಅಭಿಪ್ರಾಯಪಟ್ಟರು.
ಸಹಕಾರ ಸಂಘ ಚುನಾವಣೆ ವಿವಾದದ ಕುರಿತು ಪ್ರತಿಕ್ರಿಯೆ: ಸಹಕಾರ ಸಂಘ ಚುನಾವಣೆಯ ಕುರಿತು ಸಚಿವ ರಾಜಣ್ಣ ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, “ಅವರ ಹೇಳಿಕೆಯಿಂದ ಜನರೇ ಎಂನಾಗಿದೆ ಎಂಬುದು ತಿಳಿಯಬಹುದು. ಸಹಕಾರ ಇಲಾಖೆಯಲ್ಲಿ ರಾಜಕೀಯ ಪ್ರವೇಶಿಸುವುದು ಸರಿಯಲ್ಲ. ಶಾಸಕರಾದ ಜಿ.ಡಿ. ಹರೀಶ್ ಗೌಡ ಈ ಕುರಿತು ನ್ಯಾಯಾಲಯದ ಹೋರಾಟ ಮುಂದುವರೆಸಿದ್ದಾರೆ. ಇದರ ಫಲಿತಾಂಶಕ್ಕಾಗಿ ಕಾದು ನೋಡಬೇಕು,” ಎಂದು ಹೇಳಿದರು.
ರಾಜಕೀಯ ಭವಿಷ್ಯ ಸ್ಪಷ್ಟತೆ: ಅವರ ಅಭಿಪ್ರಾಯದಿಂದ ತಾವು ಇನ್ನೂ ಜೆಡಿಎಸ್ ಪಕ್ಷದ ಭಾಗವಾಗಿದ್ದು, ಪಕ್ಷ ಬದಲಾವಣೆ ಮಾಡುವ ಉದ್ದೇಶ ಇಲ್ಲವೆಂದು ಸ್ಪಷ್ಟವಾಗುತ್ತದೆ. “ನಾನು ಬಿಜೆಪಿಗೆ ಹೋಗುವುದಿಲ್ಲ, ಕಾಂಗ್ರೆಸ್ ಸೇರುವುದಿಲ್ಲ. ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ನನ್ನ ಕ್ಷೇತ್ರದ ಜನರ ಸೇವೆಯೇ ನನ್ನ ಮೊದಲ ಆದ್ಯತೆ. ಮುಂದಿನ ಚುನಾವಣೆಯಲ್ಲಿಯೂ ಸ್ಪರ್ಧೆ ಮಾಡುತ್ತೇನೆ,” ಎಂದು ಧೈರ್ಯದಿಂದ ಹೇಳಿದರು.