ಬೆಂಗಳೂರು : ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಆದೇಶದಂತೆ ರಾಜ್ಯದಲ್ಲಿ ಕರ್ನಾಟಕ ಸಾರಿಗೆ ಇಲಾಖೆಯಿಂದ ಎಲ್ಲ ವಾಹನಗಳಿಗೂ ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್‌ಗಳು ಅಳವಡಿಕೆಗೆ ಆದೇಶ ಹೊರಡಿಸಿದೆ. ಆದರೆ, ವಾಹನ ಸವಾರರ ಮನವಿಗೆ ಓಗೊಟ್ಟಿದ್ದ ರಾಜ್ಯ ಸರ್ಕಾರ ಈಗಾಗಲೇ ೩ ಬಾರಿ ಅವಧಿ ವಿಸ್ತರಣೆ ಮಾಡಿ ಮೇ ೩೧ಕ್ಕೆ ಗಡುವು ವಿಸ್ತರಿಸಿದೆ. ಈಗ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಅವಧಿ ವಿಸ್ತರಣೆಗೆ ಸರ್ಕಾರ ನಿರಾಸಕ್ತಿ ತೋರಿದ್ದು, ಜೂನ್ ತಿಂಗಳಿಂದ ದಂಡ ವಸೂಲಿ ಮಾಡಲು ನಿರ್ಧರಿಸಿದೆ.
ಹೌದು, ರಾಜ್ಯದ ವಾಹನ ಸವಾರರು ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಆಳವಡಿಕೆಗೆ ಆಸಕ್ತಿ ತೋರಿಸುತ್ತಿಲ್ಲ. ಏಪ್ರಿಲ್ ೨೦೧೯ ಕ್ಕಿಂತ ಮೊದಲು ರಾಜ್ಯದಲ್ಲಿ ನೋಂದಣಿ ಮಾಡಿಕೊಂಡ ಎಲ್ಲ ದ್ವಿಚಕ್ರ, ತ್ರಿಚಕ್ರ ವಾಹನಗಳು, ಕಾರುಗಳು, ಲಘು, ಮಧ್ಯಮ ಮತ್ತು ಭಾರಿ ವಾಹನಗಳಿಗೆ ಈ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ನಿಯಮ ಅನ್ವಯವಾಗಲಿದೆ. ಈವರೆಗೆ ರಾಜ್ಯದಲ್ಲಿ ೩೪ ಲಕ್ಷ ವಾಹನಗಳಿಗೆ ಮಾತ್ರ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಆಳವಡಿಕೆ ಮಾಡಲಾಗಿದೆ. ಈಗ ಮೇ ೩೧ ರೊಳಗೆ ಎಲ್ಲಾ ವಾಹನಗಳಿಗೆ ಊSಖP ನಂಬರ್ ಪ್ಲೇಟ್ ಕಡ್ಡಾಯವಾಗಿದ್ದ, ೨೧ ದಿನವಷ್ಟೇ ಬಾಕಿಯಿದೆ. ಹೀಗಿರುವಾಗ, ಇನ್ನೂ ೧.೫೬ ಕೋಟಿ ವಾಹನಗಳಿಗೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡುವುದು ಬಾಕಿಯಿದೆ.
ರಾಜ್ಯದಲ್ಲಿ ಜೂ.೧ರೊಳಗೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳದ ವಾಹನ ಸವಾರರಿಗೆ ಮೊದಲು ಬಾರಿಗೆ ೫೦೦ ರೂ. ದಂಡ, ಎರಡನೇ ಬಾರಿ ಸಿಕ್ಕಿ ಬಿದ್ದರೆ ೧,೦೦೦ ರೂ. ದಂಡ ವಿಧಿಸಲು ತೀರ್ಮಾನ ಕೈಗೊಂಡಿದೆ. ೨೦೧೯ ಏಪ್ರಿಲ್ ೧ಕ್ಕಿಂತ ಮೊದಲು ನೋಂದಣಿಯಾಗಿರುವ ಎಲ್ಲ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟೇಷನ್ ಪ್ಲೇಟ್ ಇಲ್ಲದಿದ್ದರೆ ದಂಡ ವಿಧಿಸಲಾಗುತ್ತದೆ.
ರಾಜ್ಯದಲ್ಲಿ ಕಳೆದ ೨೦೨೩ರ ನವೆಂಬರ್ ತಿಂಗಳ ೧೭ಕ್ಕೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಗಡುವು ನೀಡಿತ್ತು. ಆದರೆ, ವಾಹನ ಸವಾರರು ನಿರಾಸಕ್ತಿ ತೋರಿದ ಕಾರಣ ೨೦೨೪ರ ಫೆಬ್ರವರಿ ೧೭ವರೆಗೆ ವಿಸ್ತರಣೆ ಮಾಡಲಾಗಿತ್ತು. ಆದರೂ, ಶೇ.೩೦ರಷ್ಟು ವಾಹನ ಸವಾರರೂ ಕೂಡ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಂಡಿರಲಿಲ್ಲ. ಹೀಗಾಗಿ, ವಾಹನ ಸವಾರರ ಮನವಿ ಮತ್ತು ಹೊತದೃಷ್ಟಿಯಿಂದ ಮೇ ೩೧ವರೆಗೂ ಅವಧಿ ವಿಸ್ತರಣೆ ಮಾಡಲಾಗಿತ್ತು. ಆದರೆ, ನಿಗದಿಪಡಿಸಿರೋ ಗಡುವು ಅಂತ್ಯವಾಗಲು ಇನ್ನೂ ೨೧ ದಿನವಷ್ಟೇ ಬಾಕಿಯಿದೆ. ಇನ್ನುಮುಂದೆ ಗಡುವು ವಿಸ್ತರಣೆ ಮಾಡಲು ಸರ್ಕಾರ ಕೂಡ ನಿರಾಸಕ್ತಿ ತೋರಿಸಿದೆ. ಈ ಹಿನ್ನೆಲೆಯಲ್ಲಿ ಡೆಡ್‌ಲೈನ್ ಒಳಗೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಹಾಕಿಸಿಕೊಳ್ಳುವಂತೆ ಸಾರಿಗೆ ಇಲಾಖೆ ಮನವಿ ಮಾಡಿದೆ.