ಮಂಗಳೂರು (ದಕ್ಷಿಣ ಕನ್ನಡ) : ಪಡಿತರ ಅಂಗಡಿಯಲ್ಲಿ ಪಡಿತರ ಕಾರ್ಡ್ ಹೊಂದಿರುವ ಗ್ರಾಹಕರಿಗೆ ಅಕ್ಕಿ ಕೊಂಡು ಹೋಗಲು ಗೋಣಿ ಚೀಲವನ್ನು ಉಚಿತವಾಗಿ ನೀಡುವುದಿಲ್ಲ. ಪಡಿತರ ಅಕ್ಕಿ ಕೊಂಡು ಹೋಗುವವರು ತಮ್ಮೊಂದಿಗೆ ಗೋಣಿ ಚೀಲ ತರಬೇಕಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ಪಡಿತರ ವಿತರಕರ ಸಂಘದ ಅಧ್ಯಕ್ಷ ಕೇಶವ ಮೂರ್ತಿ ಸ್ಪಷ್ಟಪಡಿಸಿದ್ದಾರೆ.
ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಇತ್ತೀಚೆಗೆ ಮಂಗಳೂರಿನ ಕಟೀಲು ಪರಿಸರದ ನ್ಯಾಯಬೆಲೆ ಅಂಗಡಿಯೊಂದರಲ್ಲಿ ಗ್ರಾಹಕರೊಬ್ಬರು ಚಿತ್ರೀಕರಿಸಿದ ವಿಡಿಯೋದಲ್ಲಿ ಗೋಣಿಚೀಲ ಉಚಿತವಾಗಿ ನೀಡುವಂತೆ ಗಾಹಕರು ಅಂಗಡಿದಾರರನ್ನು ಬೆದರಿಸುವ ವಿಡಿಯೋ ವೈರಲ್ ಆಗುತ್ತಿದ್ದು,ಈ ವೀಡಿಯೊದ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ಕಲ್ಪನೆ ಮೂಡಿದ್ದು, ಎಲ್ಲ ನ್ಯಾಯಬೆಲೆ ಅಂಗಡಿದಾರರನ್ನು ಸಾರ್ವಜನಿಕರು ವಕ್ರದೃಷ್ಟಿಯಲ್ಲಿ ನೋಡುವಂತಾಗಿದೆ ಎಂದರು.