ಗದಗ: ರಿತ್ತಿ ಅವರ ಜಾಗದಲ್ಲಿ ಸಿಕ್ಕ ನಿಧಿಯಲ್ಲಿ 466 ಗ್ರಾಂ ತೂಕದಷ್ಟು ಚಿನ್ನಾಭರಣವಿದ್ದು, ಸದ್ಯ ಅವು ಜಿಲ್ಲಾಡಳಿತದ ವಶದಲ್ಲಿವೆ. ಇದು ಬೆಳಕಿಗೆ ಬರಲು ಕಾರಣನಾದ 14 ವರ್ಷದ ಪ್ರಜ್ವಲ್ ರಿತ್ತಿ ಪ್ರಾಮಾಣಿಕತೆ ಅನುಕರಣೀಯ ಎಂದು ಸಚಿವ ಹೆಚ್.ಕೆ.ಪಾಟೀಲ ಹೇಳಿದ್ದಾರೆ.
ಈ ಬಗ್ಗೆ ನಿಧಿಗೆ ಸಂಬಂಧಿಸಿ ಲಕ್ಕುಂಡಿಯ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಮಾತನಾಡಿದ ಅವರು, ಈ ವಿಷಯ ಮುಖ್ಯಮಂತ್ರಿ ಅವರ ಗಮನಕ್ಕೆ ಬಂದಾಗ, ನಿಧಿ ಎಷ್ಟೇ ಇರಲಿ. ಪ್ರಾಮಾಣಿಕವಾಗಿ ಅದನ್ನು ಸರ್ಕಾರಕ್ಕೆ ಒಪ್ಪಿಸಿದ ಬಾಲಕನ ನಡೆ ನಿಧಿಗಿಂತಲೂ ದೊಡ್ಡದೆಂದು ಶ್ಲಾಘಿಸಿದರು ಎಂದು ಪಾಟೀಲ್ ತಿಳಿಸಿದ್ದು, ಲಕ್ಕುಂಡಿಯನ್ನು ವಿಶ್ವ ಪರಂಪರೆಯ ತಾಣವೆಂದು ಘೋಷಿಸಲು ಸರ್ಕಾರ ನಿರಂತರ ಪ್ರಯತ್ನಗಳನ್ನು ನಡೆಯುತ್ತಿದೆ. ಪತ್ತೆಯಾದ ನಿಧಿಯಲ್ಲಿ 466 ಗ್ರಾಂ ತೂಕದ ಚಿನ್ನದ ಆಭರಣಗಳು ಮತ್ತು 634 ಗ್ರಾಂ ತಾಮ್ರದ ವಸ್ತುಗಳು ಸೇರಿದ್ದು, ಇದನ್ನು ಜಿಲ್ಲಾಡಳಿತ ತನ್ನ ವಶಕ್ಕೆ ತೆಗೆದುಕೊಂಡಿದೆ ಎಂದು ಪಾಟೀಲ್ ಹೇಳಿದ್ದಾರೆ.
ಇನ್ನೂ ಜ.26ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ರಿತ್ತಿ ಕುಟುಂಬದವರನ್ನು ಜಿಲ್ಲಾಡಳಿತ ಸನ್ಮಾನಿಸಲಿದ್ದು, ನೆರವು ನೀಡುವ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಲಿದ್ದು, ಈ ಮಾಹಿತಿಯನ್ನು ಅಂದೇ ಪ್ರಕಟಿಸಲಾಗುವುದು ಎಂದರು.
ರಾಷ್ಟ್ರಕೂಟರು, ಚಾಲುಕ್ಯರು ಆಳ್ವಿಕೆಯ ಐತಿಹಾಸಿಕ ಹಿನ್ನೆಲೆಯುಳ್ಳ ಲಕ್ಕುಂಡಿ ವಿಶಿಷ್ಟ ಸ್ಥಳ. ಈಗ ಸಿಕ್ಕಿರುವ ನಿಧಿಯನ್ನು ವಸ್ತುಸಂಗ್ರಹಾಲಯದಲ್ಲಿ ಇಡಲಾಗುವುದು. ಲಕ್ಕುಂಡಿಯ ಪ್ರಾಚ್ಯಾವಶೇಷ ಸಂಗ್ರಹ ಅಭಿಯಾನ ನಡೆಸಿದಾಗ ಗ್ರಾಮಸ್ಥರು ಈಗಾಗಲೇ 1,100ಕ್ಕೂ ಹೆಚ್ಚು ಪ್ರಾಚ್ಯವಸ್ತುಗಳನ್ನು ಒಪ್ಪಿಸಿದ್ದಾರೆ ಎಂದು ತಿಳಿಸಿದರು.



