ಶಿವಮೊಗ್ಗ : ಸಾಗರ ತಾಲ್ಲೂಕಿನ ಬೇಸೂರು ಗ್ರಾಮದಲ್ಲಿ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆಯಾಗಲಿದೆ ಎಂಬ ಸುದ್ದಿಯನ್ನು ಜಿಲ್ಲಾಧಿಕಾರಿಯಾದ ಹೇಮಂತ್.ಎನ್ ತಳ್ಳಿಹಾಕಿದ್ದು ಇದಕ್ಕೆ ಸಂಬಂಂಧಿಸಿದಂತೆ ಸ್ಪಷ್ಟನೆ ನೀಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಎನ್‌ಟಿಪಿಸಿ (NTPC) ಸಂಸ್ಥೆಯು ಬೇಸೂರು ಗ್ರಾಮದಲ್ಲಿ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪಿಸಲು ಜಮೀನು ಗುರುತಿಸಿದೆ ಮತ್ತು ಈ ಸಂಬಂಧ ಪ್ರಕ್ರಿಯೆಗಳು ನಡೆಯುತ್ತಿವೆ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿತ್ತು.
ಇದರಿಂದಾಗಿ ಸ್ಥಳೀಯ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಆತಂಕಕ್ಕೆ ಒಳಗಾಗಿರುವುದು ಗಮನಕ್ಕೆ ಬಂದಿದೆ. ಪರಮಾಣು ವಿದ್ಯುತ್ ಸ್ಥಾವರ ಸ್ಥಾಪಿಸುವ ಉದ್ದೇಶದಿಂದ ಶಿವಮೊಗ್ಗ ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಯಾವುದೇ ರೀತಿಯ ಪ್ರಸ್ತಾವನೆಯನ್ನು ಸಲ್ಲಿಸಲಾಗಿಲ್ಲ. ಜಮೀನು ಗುರುತಿಸುವಿಕೆ ಅಥವಾ ಸ್ಥಾವರ ಸ್ಥಾಪನೆಯ ಕ್ರಮಗಳು ನಡೆಯುತ್ತಿವೆ ಎಂಬುದು ಕೇವಲ ವದಂತಿಯಾಗಿದ್ದು, ಸಾರ್ವಜನಿಕರು ಅನಾವಶ್ಯಕವಾಗಿ ಆತಂಕಕ್ಕೊಳಗಾಗುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.



