ಹುಬ್ಬಳ್ಳಿ: ಮರ್ಯಾದಾ ಹತ್ಯೆಗೆ ಪ್ರತ್ಯೇಕ ಕಾನೂನಿನ ಅಗತ್ಯವಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಹೇಳಿದ್ದು, ಇತ್ತೀಚೆಗೆ ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ಮಾನ್ಯ ಎಂಬಳನ್ನು ತಂದೆ ಹಾಗೂ ಸಹೋದರರೇ ಹತ್ಯೆ ಮಾಡಿದ್ದರು. ಘಟನೆ ಬೆನ್ನಲ್ಲೇ ಗ್ರಾಮಕ್ಕೆ ಭೇಟಿ ನೀಡಿದ ಪರಮೇಶ್ವರ್ ಅವರು, ಕುಟುಂಬಕ್ಕೆ ಸಾಂತ್ವನ ಹೇಳಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೊಡ್ಮನಿ ಕುಟುಂಬದೊಂದಿಗೆ ಮಾತನಾಡಿದ್ದೇನೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು, ವಿವೇಕಾನಂದ ದೊಡ್ಡಮನಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಕುಟುಂಬದವರು ಮನವಿ ಮಾಡಿದ್ದಾರೆ.
ಅವರ ತಂಗಿಗೂ ಕೂಡ ಹೊಡೆದಿದ್ದು, ಚಿಕ್ಕ ಮಗುವಿಗೆ ಹತ್ಯೆ ಮಾಡಿರುವ ವಿಷಯವನ್ನು ಎಲ್ಲರಿಗೂ ಹೇಳಬೇಕು ಎಂದು ಅವಳಿಗೆ ಹೆದರಿಸಿದ್ದಾರೆ. ಕುಟುಂಬಸ್ಥರು ನಡೆದ ಘಟನೆ ಬಗ್ಗೆ ವಿವರಣೆ ನೀಡಿದ್ದಾರೆ. ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಸೂಕ್ತ ಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸುತ್ತೇನೆ ಎಂದು ತಿಳಿಸಿದರು.
ಇದೇ ವೇಳೆ ಮರ್ಯಾದಾ ಹತ್ಯೆಗೆ ಪ್ರತೇಕ ಕಾನೂನು ತರಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಈಗಾಗಲೇ ಸಾಕಷ್ಟು ಕಾನೂನುಗಳಿವೆ, ನ್ಯೂನತೆಗಳ ತಿದ್ದುಪಡಿ ಮಾಡಲಾಗುವುದು. ಇದಕ್ಕೆಂದೇ ಪ್ರತ್ಯೇಕ ಕಾನೂನು ಅಗತ್ಯವಿಲ್ಲ ಎಂದು ತಿಳಿಸಿದರು.



