Monday, March 16, 2026
Google search engine

Homeಸ್ಥಳೀಯಎಸ್‌ಸಿ-ಎಸ್‌ಟಿ ಸಮಸ್ಯೆಗಳ ಬಗ್ಗೆ ಗಂಭೀರತೆ ಇಲ್ಲ: ಮುಖಂಡರ ಆರೋಪ

ಎಸ್‌ಸಿ-ಎಸ್‌ಟಿ ಸಮಸ್ಯೆಗಳ ಬಗ್ಗೆ ಗಂಭೀರತೆ ಇಲ್ಲ: ಮುಖಂಡರ ಆರೋಪ

ಕೆ.ಆರ್.ನಗರ : ಕಳೆದ 26 ತಿಂಗಳಿನಿಂದ ತಾಲೂಕು ಎಸ್.ಸಿ ಮತ್ತು ಎಸ್.ಟಿ ಸಮುದಾಯದ ಕುಂದು ಕೊರತೆ ಸಭೆ ಕರೆಯದ ತಾಲೂಕು ಆಡಳಿತದ ವಿರುದ್ದ ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ತಾ.ಪಂ.ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ಸೋಮವಾರ ನಡೆದ ಎಸ್.ಸಿ. ಮತ್ತು ಎಸ್.ಟಿ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ದಲಿತ ಮುಖಂಡರುಗಳು ಅಧಿಕಾರಿಗಳ ವರ್ತನೆ ವಿರುದ್ದ ಹರಿಹಾಯ್ದರಲ್ಲದೆ ಮುಂದಿನ ದಿನಗಳಲ್ಲಿ ಇಂತಹ ಕಾಟಾಚಾರದ ಸಭೆಗಳನ್ನು ಮಾಡಬಾರದು ಎಂದು ತಾಕೀತು ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದಪ್ಪ ದಲಿತರ ಬಗ್ಗೆ ತಾಲೂಕು ಆಡಳಿತ ಅಸಡ್ಡೆ ತೋರುತ್ತಿದ್ದು ಅವರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮುಂದಾಗುತ್ತಿಲ್ಲ ಜತೆಗೆ ಇಂದು ನಡೆಯುತ್ತಿರುವ ಕುಂದುಕೊರತೆ ಸಭೆಗೆ ಬಹುತೇಕ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಾಗಿಲ್ಲ ಹಾಗಾಗಿ ಅವರ ವಿರುದ್ದ ಕಠಿಣ ಕ್ರಮಕ್ಕೆ ಶಿಫಾರಸ್ಸು ಮಾಡಬೇಕೆಂದರು.

ಹನಸೋಗೆ ನಾಗರಾಜು ಮಾತನಾಡಿ ಕುಂದುಕೊರತೆ ಸಭೆಯನ್ನು ಮುಂದಿನ ದಿನಗಳಲ್ಲಿ ಸರ್ಕಾರ ನಿಯಮದಂತೆ ಸಕಾಲದಲ್ಲಿ ಕರೆದು ಅಲ್ಲಿ ಚರ್ಚೆಯಾಗುವ ಸಮಸ್ಯೆ ಮತ್ತು ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿ ಅವುಗಳ ಪರಿಹಾರಕ್ಕೆ ಆಧ್ಯತೆ ನೀಡಬೇಕೆಂದು ಸಲಹೆ ನೀಡಿದರು.
ಸಿದ್ದಾಪುರ ಕಾಳಯ್ಯ ಮಾತನಾಡಿ ನಮ್ಮ ಗ್ರಾಮದ ದಲಿತ ಕೇರಿಗೆ ಹಲವಾರು ದಿನಗಳಿಂದ ಕಾವೇರಿ ನೀರು ಸರಬರಾಜಾಗುತ್ತಿಲ್ಲ ಇದು ದಲಿತ ವಿರೋಧಿ ನೀತಿಯೋ ಅಥವಾ ಅಧಿಕಾರಿಗಳ ಅಸಡ್ಡೆಯೋ ತಿಳಿಯದಾಗಿದ್ದು ಸಂಬಂಧಿತ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗೆ ಇತಿಶ್ರೀ ಹಾಡಬೇಕು ಎಂದು ಒತ್ತಾಯಿಸಿದರು.

ಚಿಬುಕಹಳ್ಳಿ ರಾಮಯ್ಯ ಮತ್ತು ಚಂದಗಾಲುರಾಚಯ್ಯ ಮಾತನಾಡಿ ಕೆ.ಆರ್.ನಗರ ತಾಲೂಕಿನ ಎಸ್‌ಸಿ ಮತ್ತು ಎಸ್‌ಟಿ ಸಮುದಾಯದ ಫಲಾನುಭವಿಗಳಿಗೆ ಕಳೆದ 30 ವರ್ಷಗಳಿಂದ ಆಶ್ರಯ ಹಕ್ಕು ಪತ್ರಗಳನ್ನು ನೀಡಿಲ್ಲ ಕೂಡಲೇ ತಾಲೂಕು ಆಡಳಿತ ಮತ್ತು ಕುಂದುಕೊರತೆ ಸಮಿತಿಯವರು ಹಕ್ಕು ಪತ್ರ ನೀಡಲು ಗಮನಹರಿಸಬೇಕು ಎಂದು ಆಗ್ರಹ ವ್ಯಕ್ತಪಡಿಸಿದರು.

ಹಂಪಾಪುರ ಸುರೇಶ್ ಮಾತನಾಡಿ ಎರಡು ವರ್ಷಗಳಿಗೊಮ್ಮೆ ಎಸ್‌ಸಿ ಮತ್ತು ಎಸ್‌ಟಿ ಕುಂದುಕೊರತೆ ಸಭೆ ಕರೆಯಲಾಗುತ್ತಿದೆ ಇದರ ಜತೆಗೆ ಅಧಿಕಾರಿಗಳು ಸಭೆಗೆ ಹಾಜರಾಗದೆ ಕರ್ತವ್ಯ ಲೋಪವೆಸಗುತ್ತಿದ್ದು ಹೀಗಾದರೆ ನಮ್ಮ ಸಮಸ್ಯೆ ಕೇಳುವವರು ಯಾರು ಎಂದು ಪ್ರಶ್ನಿಸಿದರು.
ಜಿ.ಕೆ.ತೋಟಪ್ಪನಾಯಕ ಮಾತನಾಡಿ ಕುಂದುಕೊರತೆ ಸಭೆಗೆ ಆಗಮಿಸುವ ಅಧಿಕಾರಿಗಳು ಪೂರ್ವ ಸಿದ್ದತೆ ಮಾಡಿಕೊಳ್ಳದೆ ಬರುವುದರ ಜತೆಗೆ ಸಭೆ ನಡೆಯುವ ಒಂದು ವಾರದ ಮುಂಚೆ ಕಳೆದ ಸಭೆಗಳಲ್ಲಿ ನಡೆದ ಚರ್ಚೆ ಮತ್ತು ಅನುಪಾಲನಾ ವರದಿಯ ಪ್ರತಿ ನೀಡದಿದ್ದರೆ ನಾವು ಯಾವ ವಿಚಾರವನ್ನು ಮಾತನಾಡಬೇಕು ಎಂದು ಸಿಟ್ಟಿನಿಂದ ಕೇಳಿದರು.

ದಲಿತ ಮುಖಂಡರಾದ ಮಾರಗೌಡನಹಳ್ಳಿಸ್ವಾಮಿ, ಹೋಸಕೋಟೆಚೆಲುವರಾಜು, ಕಳ್ಳಿಮುದ್ದನಹಳ್ಳಿಚಂದ್ರು, ವಜ್ರೇಶ್, ಕೃಷ್ಣಯ್ಯ, ಕಾಶಿ, ತಿಪ್ಪೂರುಮಹದೇವನಾಯಕ, ಎಂ.ಎಸ್.ಮಹದೇವ್, ರಾಜಯ್ಯ, ರಾಜೇಶ್, ಪುಟ್ಟಣ್ಣಯ್ಯ, ವೆಂಕಟೇಶ್, ಸ್ವಾಮಿ ಸೇರಿದಂತೆ ಇತರರು ಸಭೆಯಲ್ಲಿ ಪಾಲ್ಗೊಂಡು ತಮ್ಮ ಸಲಹೆ ಸೂಚನೆ ನೀಡಿದರು.

ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ ಮಾತನಾಡಿ ಇಂದಿನ ಸಭೆಯಲ್ಲಿ ಚರ್ಚೆಯಾಗಿರುವ ಎಲ್ಲಾ ವಿಚಾರಗಳು ಮತ್ತು ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವುದರ ಜತೆಗೆ ಮುಂದಿನ ಸಭೆಗೆ ಅನುಪಾನ ವರದಿಯನ್ನು ಕಡ್ಡಾಯವಾಗಿ ನೀಡುವ ಭರವಸೆ ನೀಡಿದರು.
ತಾ.ಪಂ. ಇಒ ವಿ.ಪಿ.ಕುಲದೀಪ್, ಪೊಲೀಸ್ ಇನ್ಸ್ಪೆಕ್ಟರ್ ಎಸ್.ಶಿವಪ್ರಕಾಶ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶಂಕರಮೂರ್ತಿ, ಸಹಾಯಕ ಕೃಷಿ ನಿರ್ದೇಶಕ ಕೆ.ಜೆ.ಮಲ್ಲಿಕಾರ್ಜುನ, ಬಿಇಒ ಆರ್.ಕೃಷ್ಣಪ್ಪ, ಸೆಸ್ಕಾಂ ಎಇಇ ಅರ್ಕೇಶ್ವರಮೂರ್ತಿ, ವಲಯ ಅರಣ್ಯಾಧಿಕಾರಿ ಟಿ.ವಿ.ಹರಿಪ್ರಸಾದ್, ಪುರಸಭೆ ಮುಖ್ಯಾಧಿಕಾರಿ ಜಿ.ಎಸ್.ರಮೇಶ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular