ಬೆಂಗಳೂರು : ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ, ನಿವಾಸಿ ಪ್ರಮಾಣಪತ್ರ (ಪಿಆರ್ಸಿ) ವಿತರಣೆ ಹಾಗೂ ಮತಬ್ಯಾಂಕ್ ರಾಜಕಾರಣದ ವಿಚಾರವಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರಾಜ್ಯ ಸರ್ಕಾರ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಗೃಹ ಸಚಿವರು ಎಲ್ಲಿದ್ದಾರೆ? ರಾಜ್ಯದಲ್ಲಿ ನಡೆಯುತ್ತಿರುವ ಅತ್ಯಾಚಾರ, ಕೊಲೆ, ರಸ್ತೆ ಗಲಾಟೆ ಹಾಗೂ ಡ್ರಗ್ಸ್ ಅಕ್ರಮಗಳ ಬಗ್ಗೆ ಒಂದು ದಿನವೂ ಮಾತನಾಡಿಲ್ಲ. ಬೆಳಗ್ಗೆ ಎದ್ದರೆ ಆರ್ಎಸ್ಎಸ್ ಬಗ್ಗೆ ಮಾತ್ರ ಮಾತನಾಡುತ್ತಾರೆ. ಅವರು ಗೃಹ ಸಚಿವರಲ್ಲ, ಆರ್ಎಸ್ಎಸ್ ಸಚಿವರು ಎಂದು ವ್ಯಂಗ್ಯವಾಡಿದರು.
ಅಲ್ಲದೆ, ರಾಜ್ಯ ಸರ್ಕಾರ ಸರ್ಕಾರದಂತೆ ಕೆಲಸ ಮಾಡುತ್ತಿಲ್ಲ, ಕಾಂಗ್ರೆಸ್ ಪಕ್ಷದಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದ ಶೋಭಾ ಕರಂದ್ಲಾಜೆ, ಅಧಿಕಾರಿಗಳ ಮೇಲೆ ಒತ್ತಡ ಹೇರಿ ಆಡಳಿತ ನಡೆಸಲಾಗುತ್ತಿದೆ ಎಂದು ಟೀಕಿಸಿದರು. ನಿವಾಸಿ ಪ್ರಮಾಣಪತ್ರ (ಪಿಆರ್ಸಿ) ವಿತರಣೆಯ ವಿಚಾರ ಪ್ರಸ್ತಾಪಿಸಿದ ಅವರು, ಎನ್ಯೂಮರೇಷನ್ ಫಾರಂ ವಿತರಣೆಯಲ್ಲೇ ಹಣ ಪಡೆದ ಆರೋಪಗಳಿರುವಾಗ, ಪಿಆರ್ಸಿ ನೀಡುವ ಪ್ರಕ್ರಿಯೆ ಪಾರದರ್ಶಕವಾಗಿರುತ್ತದೆ ಎಂದು ಹೇಗೆ ನಂಬುವುದು? ಎಂದು ಪ್ರಶ್ನಿಸಿದರು.
ಇದೇ ವೇಳೆ ರಾಜ್ಯ ಸರ್ಕಾರ ಪಿಆರ್ಸಿ ನೀಡುವ ಹಿಂದೆ ಮತಬ್ಯಾಂಕ್ ರಾಜಕಾರಣವೇ ಉದ್ದೇಶವಾಗಿದೆ ಎಂದು ಆರೋಪಿಸಿದ ಅವರು, ಎಸ್ಐಆರ್ ಪ್ರಕ್ರಿಯೆ ನಡೆಯುತ್ತಿರುವ ಸಮಯದಲ್ಲೇ ಪಿಆರ್ಸಿ ವಿತರಣೆಗೆ ಮುಂದಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದವರನ್ನು ರಾಜ್ಯದ ನಿವಾಸಿಗಳನ್ನಾಗಿ ಮಾಡಲು ಸರ್ಕಾರ ಯತ್ನಿಸುತ್ತಿದೆ. ಇದರಿಂದ ಸರ್ಕಾರದ ಸೌಲಭ್ಯಗಳು ಮತ್ತು ಮತದಾನದ ಹಕ್ಕು ದುರುಪಯೋಗವಾಗುವ ಸಾಧ್ಯತೆ ಇದೆ ಎಂದು ಹೇಳಿದರು.
ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಇಂತಹ ಕ್ರಮ ಕೈಗೊಂಡಿರಲಿಲ್ಲ. ಈಗಿನ ಸರ್ಕಾರ ದೇಶದ ಭದ್ರತೆಗೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದ ಅವರು, ವಿವಿಧ ರಾಜ್ಯಗಳಿಂದ ಕರ್ನಾಟಕಕ್ಕೆ ಅಕ್ರಮವಾಗಿ ಬಂದಿರುವ ಬಾಂಗ್ಲಾದೇಶ ಮೂಲದ ವಲಸಿಗರನ್ನು ಗುರುತಿಸಿರುವುದಾಗಿ ತಿಳಿಸಿದರು.
ರಾಜ್ಯದ ನೈಜ ನಿವಾಸಿಗಳ ಹಿತಾಸಕ್ತಿಗಿಂತ ಅಲ್ಪಸಂಖ್ಯಾತ ಮತಬ್ಯಾಂಕ್ ರಾಜಕಾರಣಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಆರೋಪಿಸಿದ ಶೋಭಾ ಕರಂದ್ಲಾಜೆ, ಕಾನೂನುಬಾಹಿರವಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಟೀಕಿಸಿದರು.



