ಬೆಂಗಳೂರು: ಮುಂಗಾರು ಮಳೆ ಆರಂಭವಾಗುತ್ತಿದ್ದಂತೆಯೇ ನಗರದ ಮೂಲಸೌಕರ್ಯಗಳ ಸ್ಥಿತಿ ಬಯಲಾಗಿದ್ದು, ‘ಬ್ರ್ಯಾಂಡ್ ಬೆಂಗಳೂರು’ ಎಂಬುದು ಕೇವಲ ಘೋಷಣೆಯಾಗಿ ಉಳಿದಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, “ಇದು ಬ್ರ್ಯಾಂಡ್ ಬೆಂಗಳೂರು ಅಲ್ಲ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಕೃಷ್ಣ ಬೈರೇಗೌಡ ಅವರ ಜುಗಲ್‌ಬಂದಿಯ ಬ್ರೋಕನ್ ಬೆಂಗಳೂರು” ಎಂದು ಟೀಕಿಸಿದ್ದಾರೆ.
ನಗರದ ರಸ್ತೆಗಳಲ್ಲಿ 5,000ಕ್ಕೂ ಅಧಿಕ ಗುಂಡಿಗಳು ಕಂಡುಬರುತ್ತಿದ್ದು, ಮಳೆಗಾಲದಲ್ಲಿ ಬೈಕ್ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಶೋಕ ಆರೋಪಿಸಿದ್ದಾರೆ. ರಸ್ತೆ ದುರಸ್ತಿ ಕಾಮಗಾರಿಗಳಲ್ಲಿ ಕೇವಲ 20 ಶೇಕಡಾ ಮಾತ್ರ ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಗಳು ಇನ್ನೂ ನೆನೆಗುದಿಗೆ ಬಿದ್ದಿವೆ ಎಂದು ಅವರು ಹೇಳಿದ್ದಾರೆ.
ನಗರದಾದ್ಯಂತ ಕಸದ ರಾಶಿಗಳು ತುಂಬಿಕೊಂಡಿದ್ದು, ಮಳೆ ನೀರಿನೊಂದಿಗೆ ಕೊಳೆತು ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಎದುರಾಗಿದೆ. ಕಸ ವಿಲೇವಾರಿ ವ್ಯವಸ್ಥೆ ಸಂಪೂರ್ಣ ವಿಫಲವಾಗಿದ್ದು, ಸ್ವಚ್ಛತೆ ಕಾಪಾಡಬೇಕಾದ ಸಿಬ್ಬಂದಿಯೇ ಕಸವನ್ನು ರಸ್ತೆ ಮಧ್ಯೆ ಸುರಿಯುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.
ವಿಟ್ಟಸಂದ್ರದಲ್ಲಿ ಕಸ ವರ್ಗಾವಣೆ ಕೇಂದ್ರ ಸ್ಥಾಪನೆಗೆ ಸ್ಥಳೀಯರ ವಿರೋಧವಿದ್ದರೂ ಸರ್ಕಾರ ಮುಂದಾಗಿರುವುದನ್ನು ಅವರು ಖಂಡಿಸಿದ್ದಾರೆ. ಬೆಂಗಳೂರಿಗೆ ₹2,000 ಕೋಟಿ ಬಿಡುಗಡೆ ಮಾಡಿದ್ದೇವೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದ್ದರೂ ಆ ಹಣ ಎಲ್ಲಿಗೆ ಹೋಗಿದೆ ಎಂದು ಪ್ರಶ್ನಿಸಿರುವ ಅಶೋಕ, ತಕ್ಷಣ ರಸ್ತೆ ಗುಂಡಿಗಳನ್ನು ಮುಚ್ಚಿ ಕಸದ ಸಮಸ್ಯೆ ಬಗೆಹರಿಸದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.



