ಬೆಂಗಳೂರು: ಕರ್ನಾಟಕದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿಯಲ್ಲಿ ವೇತನ ಪಾವತಿ, ಸಾಮಗ್ರಿ ಖರೀದಿ ಮತ್ತಿತರ ವೆಚ್ಚಗಳನ್ನು ಭರಿಸಲು ಬಾಕಿ ಇರುವ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದಿದ್ದಾರೆ.
ಲಕ್ಷಾಂತರ ಗ್ರಾಮೀಣ ಕಾರ್ಮಿಕರ ಜೀವನೋಪಾಯದ ಭದ್ರತೆ ಖಾತ್ರಿ ಮಾತ್ರವಲ್ಲದೆ, ಆಡಳಿತಾತ್ಮಕ ದಕ್ಷತೆ ಮತ್ತು ಮಹತ್ವದ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ನಂಬಿಕೆ ಉಳಿಸಿಕೊಳ್ಳಲು ಸಮಯೋಚಿತ ಬಾಕಿ ವಿತರಣೆ ಅತ್ಯಗತ್ಯ ಎಂದು ಪತ್ರದಲ್ಲಿ ಅಪ್ರಾಯಪಟ್ಟಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಯಾವುದೇ ಸಾಮಾಗ್ರಿ ನಿಧಿ ಬಿಡುಗಡೆ ಮಾಡಿಲ್ಲ. ಇದರಿಂದಾಗಿ ರೂ. 787.20 ಕೋಟಿ ಬಿಲ್ ಬಾಕಿ ಉಳಿದಿದೆ. ಹೆಚ್ಚುವರಿಯಾಗಿ, ಸುಮಾರು ರೂ. 600 ಕೋಟಿ ರೂ.ಗಳ ವೇತನ ಬಾಧ್ಯತೆಗಳು ಬಾಕಿ ಉಳಿದಿವೆ.ನರೇಗಾ ಯೋಜನೆಯಡಿ ಅನುದಾನ ಬಿಡುಗಡೆಯಲ್ಲಿ ನಿರಂತರ ವಿಳಂಬದ ಬಗ್ಗೆ ಕಳವಳ ವ್ಯಕ್ತಪಡಿಸಿದ ಖರ್ಗೆ, ಗ್ರಾಮೀಣಾಭಿವೃದ್ಧಿ ಕಮಿಷನರೇಟ್ ಎಲ್ಲಾ ಅಗತ್ಯ ಪ್ರಮಾಣಪತ್ರಗಳು ಮತ್ತು ಪೂರಕ ದಾಖಲೆಗಳನ್ನು ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ಸಲ್ಲಿಸಿದೆ ಎಂದು ತಿಳಿಸಿದ್ದಾರೆ.
ಡಿಸೆಂಬರ್ 2024 ರಿಂದ ಕ್ಷೇತ್ರ ಮಟ್ಟದ ಸಿಬ್ಬಂದಿ ಮತ್ತು ಕಾರ್ಯನಿರ್ವಾಹಕರ ವೇತನವನ್ನು ಪಾವತಿಸದಿರುವುದರಿಂದ ಈ ವಿಳಂಬವು ಕಾರ್ಯಾಚರಣೆ, ಮೇಲ್ವಿಚಾರಣೆ ಮತ್ತು ಯೋಜನೆಯ ಅನುಷ್ಠಾನದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ಖರ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.