ನವದೆಹಲಿ: ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳಿಗೆ ನೀಡಲಾಗುತ್ತಿದ್ದ ವಾರ್ಷಿಕ ಸಬ್ಸಿಡಿ ಸಿಲಿಂಡರ್‌ಗಳ ಸಂಖ್ಯೆಯನ್ನು 9ರಿಂದ 4ಕ್ಕೆ ಇಳಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ. ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಎಲ್‌ಪಿಜಿ ಪೂರೈಕೆಯ ಮೇಲಿನ ಒತ್ತಡದ ಹಿನ್ನೆಲೆಯಲ್ಲಿ ಈ ಕ್ರಮ ಜಾರಿಗೊಂಡಿದೆ.
2016ರಲ್ಲಿ ಉಜ್ವಲ ಯೋಜನೆ ಆರಂಭವಾದಾಗ ವರ್ಷಕ್ಕೆ 12 ಸಬ್ಸಿಡಿ ಸಿಲಿಂಡರ್‌ಗಳನ್ನು ನೀಡಲಾಗುತ್ತಿತ್ತು. ಬಳಿಕ ಅದನ್ನು 9ಕ್ಕೆ ಇಳಿಸಲಾಗಿತ್ತು. ಇದೀಗ ಮತ್ತೊಮ್ಮೆ ಕಡಿತಗೊಳಿಸಿ 4 ಸಿಲಿಂಡರ್‌ಗಳಿಗೆ ಮಿತಿಗೊಳಿಸಲಾಗಿದೆ. ಆದರೆ 14.2 ಕೆಜಿ ಗೃಹಬಳಕೆಯ ಸಿಲಿಂಡರ್‌ಗೆ ನೀಡಲಾಗುತ್ತಿರುವ ₹300 ಸಬ್ಸಿಡಿ ಮುಂದುವರಿಯಲಿದ್ದು, ಈ ಮೊತ್ತ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ.
ಪ್ರಸ್ತುತ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ₹942 ಆಗಿದ್ದು, ಸಬ್ಸಿಡಿ ಬಳಿಕ ಉಜ್ವಲ ಯೋಜನೆ ಗ್ರಾಹಕರು ₹642 ಪಾವತಿಸಬೇಕಾಗುತ್ತದೆ. ಉಜ್ವಲ ಯೋಜನೆಯಡಿ ಬರುವ ಹೆಚ್ಚಿನ ಕುಟುಂಬಗಳು ವರ್ಷಕ್ಕೆ ಸರಾಸರಿ ನಾಲ್ಕು ಸಿಲಿಂಡರ್‌ಗಳಷ್ಟೇ ಬಳಸುತ್ತಿರುವುದಾಗಿ ಸರ್ಕಾರದ ಸಮೀಕ್ಷೆಯಲ್ಲಿ ತಿಳಿದುಬಂದಿದೆ.
ಒಂದು ಸಿಲಿಂಡರ್ ಪೂರೈಕೆಗೆ ಸರ್ಕಾರಕ್ಕೆ ₹1,600ಕ್ಕಿಂತ ಹೆಚ್ಚು ವೆಚ್ಚವಾಗುತ್ತಿದ್ದು, ತೈಲ ಕಂಪನಿಗಳು ಪ್ರತಿ ಸಿಲಿಂಡರ್ ಮೇಲೆ ಗಮನಾರ್ಹ ನಷ್ಟ ಅನುಭವಿಸುತ್ತಿವೆ. ಈ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಸರ್ಕಾರ ಈ ಕ್ರಮ ಕೈಗೊಂಡಿದೆ.



