ಮೈಸೂರು: ಶುಶ್ರೂಷೆ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನ-ವಿಜ್ಞಾನ ಹಾಗೂ ಆವಿಷ್ಕಾರವನ್ನು ಬಳಕೆ ಮಾಡುವುದು ಅಗತ್ಯವಿದೆ ಎಂದು ಆಸ್ಟ್ರೇಲಿಯಾದ ಸಂತ ಲಿಯೊನಾರ್ಡೊ ಆರ್.ಎನ್.ಪ್ರಿನ್ಸ್ ಆಫ್ ವೇಲ್ಸ್ ಆಸ್ಪತ್ರೆಯ ಮುಖ್ಯ ನರ್ಸಿಂಗ್ ಶಿಕ್ಷಕಿ ಆರಥಿ ಪ್ರಾನ್ಸಿಸ್ ತಿಳಿಸಿದ್ದಾರೆ.
ಜೆಎಸ್‌ಎಸ್ ನರ್ಸಿಂಗ್ ಕಾಲೇಜು ವತಿಯಿಂದ ಶುಕ್ರವಾರ ಜೆಎಸ್‌ಎಸ್ ಆಸ್ಪತ್ರೆಯ ರಾಜೇಂದ್ರ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ಆಧುನಿಕ ತಂತ್ರಜ್ಞಾನ-ವಿಜ್ಞಾನ ಬಳಕೆಯಿಂದ ನರ್ಸಿಂಗ್ ಸೈನ್ಸ್‌ನಲ್ಲಿ ಸುಧಾರಣೆ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಹೊಸ ವಿಧಾನಗಳನ್ನು ಬಳಕೆ ಮಾಡುವ ಮುಖಾಂತರ ರೋಗಿಗೆ ಪರಿಣಾಮಕಾರಿಯಾದ ಚಿಕಿತ್ಸೆ ನೀಡಲು ಸಾಧ್ಯವಿದೆ. ಆಸ್ಟ್ರೇಲಿಯಾ, ಕೆನಡಾ, ಯುಕೆಯಂತಹ ದೇಶಗಳಲ್ಲಿ ಶುಶ್ರೂಷಕಿಯರು ಈ ರೀತಿಯ ಅತ್ಯಾಧುನಿಕ ಶುಶ್ರೂಷಕ ವಿಧಾನವನ್ನು ಬಳಕೆ ಮಾಡಿಕೊಳ್ಳುವ ಮುಖಾಂತರ ತಮ್ಮ ಸಾಮರ್ಥ್ಯ ಹೆಚ್ಚಿಸಿಕೊಂಡಿದ್ದಾರೆ. ಇದರಿಂದ ಗುಣಾತ್ಮಕ ಚಿಕಿತ್ಸೆ ದೊರೆಯುವುದಲ್ಲದೇ ವೆಚ್ಚವೂ ಕಡಿಮೆಯಾಗಿದೆ. ಹೀಗಾಗಿ ಈ ರೀತಿಯ ಬದಲಾವಣೆ ಅಗತ್ಯವಿದೆ ಎಂದರು.
ಶುಶ್ರುಷೆಯಲ್ಲಿ ಸಂಶೋಧನೆ ಮತ್ತು ಆವಿಷ್ಕಾರ ಚಟುವಟಿಕೆಗಳು ನಡೆಯುತ್ತಿರುವುದರಿಂದ ಮಹತ್ತರವಾದ ಬದಲಾವಣೆಗಳಾಗುತ್ತಿವೆ. ಶುಶ್ರೂಷಕಿಯರು ಎಂದರೆ ಕೇವಲ ಸೇವೆ ನೀಡುವವರಲ್ಲ. ಸಂಶೋಧನಾತ್ಮಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಈ ಕ್ಷೇತ್ರದ ದಿಕ್ಕನ್ನೇ ಬದಲಿಸಲು ಅವರಿಗೆ ಅವಕಾಶವಿದೆ. ಈ ರೀತಿಯಲ್ಲಿ ಆಲೋಚಿಸಿ ನರ್ಸಿಂಗ್ ಕ್ಷೇತ್ರವನ್ನು ಹೊಸ ದಿಕ್ಕಿನತ್ತ ತೆಗೆದುಕೊಂಡು ಹೊಗಬೇಕಿದೆ. ಹೊಸದನ್ನು ಹುಟ್ಟು ಹಾಕುವ ಶಕ್ತಿ ಸಾಮರ್ಥ್ಯ ರೂಢಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಈ ರೀತಿಯ ಸಮ್ಮೇಳನಗಳು ಪ್ರಯೋಜನಕಾರಿಯಾಗಲಿವೆ ಎಂದರು.
ಜೆಎಸ್‌ಎಸ್ ಎಎಚ್‌ಇಆರ್ ಕುಲಪತಿ ಡಾ.ಸುರೀಂದರ್ ಸಿಂಗ್, ಹೊಸದಿಲ್ಲಿಯ ಡಾ.ಆರ್.ಎಂ.ಎಲ್. ಆಸ್ಪತ್ರೆಯ ನರ್ಸಿಂಗ್ ವಿಭಾಗದ ನಿವೃತ್ತ ಸಹಾಯಕ ನಿರ್ದೇಶಕಿ ಡಾ.ರತಿ ಬಾಲಚಂದ್ರನ್ ಜೆಎಸ್‌ಎಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಸಿ.ಪಿ. ಮಧು, ಪ್ರಭಾರ ನಿರ್ದೇಶಕ ಕೆ.ಎಲ್. ರೇವಣ್ಣಸ್ವಾಮಿ ಹಾಗೂ ಇತರರು ಇದ್ದರು.