Monday, June 16, 2025
Google search engine

HomeUncategorizedರಾಷ್ಟ್ರೀಯ2027ರ ಜನಗಣತಿಗೆ ಕೇಂದ್ರದಿಂದ ಅಧಿಕೃತ ಅಧಿಸೂಚನೆ

2027ರ ಜನಗಣತಿಗೆ ಕೇಂದ್ರದಿಂದ ಅಧಿಕೃತ ಅಧಿಸೂಚನೆ

ಹೊಸದಿಲ್ಲಿ: 16ನೇ ರಾಷ್ಟ್ರೀಯ ಜನಗಣತಿಯು 2027ರಲ್ಲಿ ನಡೆಯಲಿದ್ದು, ಈ ಕುರಿತು ಕೇಂದ್ರ ಸರ್ಕಾರ ಇಂದು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಮಹತ್ವದ ಈ ಕಾರ್ಯಾಚರಣೆ ಎರಡು ಹಂತಗಳಲ್ಲಿ ಜರಗಲಿದ್ದು, ಲಡಾಕ್‌ನಂತಹ ಹಿಮಚ್ಛಾದಿತ ಪ್ರದೇಶಗಳಲ್ಲಿ ಅದು 2026ರ ಅಕ್ಟೋಬರ್ 1ರಿಂದ ಆರಂಭವಾಗಲಿದೆ. ಉಳಿದ ಭಾಗಗಳಲ್ಲಿ ಜನಗಣತಿ ಕಾರ್ಯ 2027ರ ಮಾರ್ಚ್ 1ರಿಂದ ಶುರುವಾಗಲಿದೆ.

ಈ ಅಧಿಸೂಚನೆಯೊಂದಿಗೆ ದೇಶದಾದ್ಯಂತ ಜನಸಂಖ್ಯಾ ಅಂಕಿ-ಅಂಶಗಳ ಸಂಗ್ರಹಕ್ಕೆ ಚಾಲನೆ ಸಿಕ್ಕಿದ್ದು, ಇದು ಭಾರತದಲ್ಲಿ 2011ರ ನಂತರ ನಡೆಯುವ ಮೊದಲ ಮಹಾ ಜನಗಣತಿ ಆಗಿದೆ. ಸುಮಾರು 16 ವರ್ಷಗಳ ನಂತರ ನಡೆಯುತ್ತಿರುವ ಈ ಪ್ರಕ್ರಿಯೆಯು ಜಾತಿ ಆಧಾರಿತ ಗಣತಿಯನ್ನೂ ಒಳಗೊಂಡಿರುತ್ತದೆ ಎಂದು ಕೇಂದ್ರ ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.

ಜನಗಣತಿ ಕಾರ್ಯದಲ್ಲಿ ಅಂದಾಜು 34 ಲಕ್ಷ ಗಣತಿದಾರರು ಹಾಗೂ ಮೇಲ್ವಿಚಾರಕರು ಭಾಗವಹಿಸಲಿದ್ದು, ಸುಮಾರು 1.3 ಲಕ್ಷ ಜನಗಣತಿ ಅಧಿಕಾರಿ ಡಿಜಿಟಲ್ ಸಾಧನಗಳೊಂದಿಗೆ ಕಾರ್ಯನಿರ್ವಹಿಸಲಿದ್ದಾರೆ. ಈ ಬಾರಿ ಗಣತಿ ಸಂಪೂರ್ಣ ಡಿಜಿಟಲ್ ತಂತ್ರಜ್ಞಾನದ ಆಧಾರಿತವಾಗಿದ್ದು, ಮೊಬೈಲ್ ಆಪ್, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿಕೊಂಡು ಮಾಹಿತಿ ಸಂಗ್ರಹಿಸಲಾಗುತ್ತದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೇಂದ್ರ ಗೃಹ ಕಾರ್ಯದರ್ಶಿ, ರಿಜಿಸ್ಟ್ರಾರ್ ಜನರಲ್ ಮತ್ತು ಭಾರತದ ಜನಗಣತಿ ಆಯುಕ್ತ ಮೃತ್ಯುಂಜಯ್ ಕುಮಾರ್ ನಾರಾಯಣ್ ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ಜನಗಣತಿಯ ಸಿದ್ಧತೆಗಳನ್ನು ಪರಿಶೀಲಿಸಿದ್ದರು.

ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು – ಮನೆ ಪಟ್ಟಿ ಕಾರ್ಯಾಚರಣೆ (HLO), ಮೊದಲ ಹಂತದಲ್ಲಿ ನಡೆಯಲಿದೆ. ಇದರಲ್ಲಿ ಪ್ರತಿ ಮನೆಯ ವಸತಿ ಪರಿಸ್ಥಿತಿಗಳು, ಆಸ್ತಿಗಳು ಮತ್ತು ಸೌಲಭ್ಯಗಳ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತದೆ. ಇನ್ನೊಂದು ಹಂತದಲ್ಲಿ ಪ್ರತಿ ಮನೆಯ ಪ್ರತಿಯೊಬ್ಬರ ಆರ್ಥಿಕ, ಸಾಂಸ್ಕೃತಿಕ ಮತ್ತು ಇತರ ವಿವರಗಳನ್ನು ಸಂಗ್ರಹಿಸುವ ಜನಸಂಖ್ಯಾ ಗಣತಿ (PE) ನಡೆಯಲಿದೆ. ಜನಗಣತಿಯಲ್ಲಿ, ಜಾತಿ ಗಣತಿಯನ್ನು ಸಹ ಮಾಡಲಾಗುತ್ತದೆ ಎಂದು ಗೃಹ ಸಚಿವಾಲಯ ತಿಳಿಸಿದೆ.

ಜನಗಣತಿ ಸಮಯದಲ್ಲಿ ದತ್ತಾಂಶ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಬಹಳ ಕಠಿಣ ದತ್ತಾಂಶ ಭದ್ರತಾ ಕ್ರಮಗಳನ್ನು ಜಾರಿಯಲ್ಲಿಡಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.ಕಾಲ್ ಜಾರಿಗೆ ತರಲಾಗುತ್ತದೆ. ಭದ್ರತಾ ಕ್ರಮಗಳನ್ನು ಗಟ್ಟಿಯಾಗಿ ಅನುಸರಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

RELATED ARTICLES
- Advertisment -
Google search engine

Most Popular