Wednesday, May 21, 2025
Google search engine

Homeರಾಜ್ಯಸುದ್ದಿಜಾಲಡಿ.೧ರಂದು ರಾಷ್ಟ್ರದಾದ್ಯಂತ ವಿಶ್ವ ಏಡ್ಸ್ ದಿನಾಚರಣೆ

ಡಿ.೧ರಂದು ರಾಷ್ಟ್ರದಾದ್ಯಂತ ವಿಶ್ವ ಏಡ್ಸ್ ದಿನಾಚರಣೆ

ಶಿವಮೊಗ್ಗ: ಹೆಚ್‌ಐವಿ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲು ಮತ್ತು ರೋಗದಿಂದ ಮರಣ ಹೊಂದಿದವರಿಗೆ ಸಂತಾಪ ಸೂಚಿಸುವ ಸಲುವಾಗಿ, ಡಿಸೆಂಬರ್ ೧ ರಂದು ರಾಷ್ಟ್ರದಾದ್ಯಂತ ವಿಶ್ವ ಏಡ್ಸ್ ದಿನಾಚರಣೆಯನ್ನು ಆಚರಿಸಲಾಗುತ್ತದೆ.
ಸಾರ್ವಜನಿಕ ಆರೋಗ್ಯ ಅಭಿಯಾನಗಳಲ್ಲಿ ಒಂದಾಗಿದೆ. ವಿಶ್ವ ಏಡ್ಸ್ ದಿನಾಚರಣೆಯನ್ನು ಮೊದಲು ಡಿಸೆಂಬರ್ ೧೯೮೮ ರಿಂದ ಪ್ರಾರಂಭಿಸಲಾಯಿತು.

ಸಮುದಾಯಗಳನ್ನು ಮುನ್ನಡೆಸುವ ಮೂಲಕ ಜಗತ್ತಿನಲ್ಲಿ ಏಡ್ಸ್‌ನ್ನು ಕೊನೆಗಾಣಿಸಬಹುದು. ಹೆಚ್.ಐ.ವಿ ಯನ್ನು ಅಂತ್ಯಗೊಳಿಸುವಲ್ಲಿ ಸಮುದಾಯಗಳು ನಾಯಕತ್ವದ ಪಾತ್ರವನ್ನು ಹೆಚ್ಚಾಗಿ ಮಾಡಬೇಕಾಗಿದೆ. ವಿಶ್ವ ಏಡ್ಸ್ ದಿನವು, ಇಲ್ಲಿಯವರೆಗಿನ ಪ್ರಗತಿಯನ್ನು ಪ್ರತಿಬಿಂಬಿಸಲು, ೨೦೩೦ರ ವೇಳೆಗೆ ಏಡ್ಸ್‌ನ್ನು ಕೊನೆಗೊಳಿಸುವ ಗುರಿ ಸಾಧಿಸಲು, ಕಾರ್ಯಕ್ರಮದ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಹೆಚ್.ಐ.ವಿ ಪ್ರತಿಕ್ರಿಯೆಯ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ಒಂದು ಅವಕಾಶವಾಗಿದೆ.

ಈ ವರ್ಷದ ಘೋಷವಾಕ್ಯ ಸಮುದಾಯಗಳು ಮುನ್ನಡೆಸಲಿ (ಸಮುದಾಯಗಳು ಮುನ್ನಡೆಸುವ ಮೂಲಕ ಜಗತ್ತಿನ ಏಡ್ಸ್ ಕೊನೆಗಾಣಿಸಬಹುದು.) ಎಂಬುದಾಗಿದೆ. ಸೋಂಕಿತರಿಗೆ ಸಂಬಂಧಿಸಿದ ಮಾಹಿತಿ ತಿಳಿದವರು ಇತರರಿಗೆ ತಿಳಿಸುವ ಸದಾವಕಾಶದ ದಿನ ಇದು. ಹೆಚ್.ಐ.ವಿ ಸೋಂಕು ತಡೆಗಟ್ಟಲು ಜನಸಾಮಾನ್ಯರಲ್ಲಿ ಸೂಕ್ತ ಅರಿವು ಹಾಗೂ ಜಾಗೃತಿ ಮೂಡಿಸುವುದಕ್ಕಾಗಿ ಹಾಗೂ ಇದನ್ನು ಎದುರಿಸಲು ನಮ್ಮ ಮುಂದಿರುವ ಸವಾಲುಗಳ ಬಗ್ಗೆ ಚಿಂತಿಸುವ ಹಾಗೂ ಹೆಚ್.ಐ.ವಿ ಏಡ್ಸ್ ನಿಯಂತ್ರಣ ಕುರಿತು ಸರ್ಕಾರಗಳು ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳು ಕೈಗೊಂಡ ಕ್ರಮಗಳ ಬಗ್ಗೆ ಜನರಿಗೆ ತಿಳಿಸುವ ಸದಾವಕಾಶ ಹೊಂದಿರುವ ದಿನವಿದು.
ಹೆಚ್‌ಐವಿ ಯು ಅಸುರಕ್ಷಿತ ಲೈಂಗಿಕ ಸಂಪರ್ಕ. ಪರೀಕ್ಷೆ ಮಾಡದ/ಸೋಂಕಿತ ರಕ್ತ ಮತ್ತು ರಕ್ತ ಉತ್ಪನ್ನಗಳ ವರ್ಗಾವಣೆ. ಸಂಸ್ಕರಿಸದ ಚೂಪು ಸಾಧನಗಳು, ಸೂಜಿ, ಸಿರಿಂಜು, ಶಸ್ತ್ರಕ್ರಿಯಾ ಸಾಧನಗಳನ್ನು ಬಳಸುವುದರಿಂದ ಹಾಗೂ ಹೆಚ್‌ಐವಿ ಸೋಂಕಿರುವ ತಾಯಿಯಿಂದ ಮಗುವಿಗೆ ಈ ಮಾರ್ಗಗಳ ಮೂಲಕ ಹರಡಬಹುದು. ಹೆಚ್‌ಐವಿ ಸೋಂಕು ಈ ಮಾರ್ಗಗಳಲ್ಲದೆ ಬೇರೆ ಮಾರ್ಗಗಳಿಂದ ಹರಡುವುದಿಲ್ಲ. ಹೆಚ್‌ಐವಿ ಯನ್ನು ಲೈಂಗಿಕ ಸಂಪರ್ಕದಿಂದ, ರಕ್ತದ ಮೂಲಕ ಹಾಗೂ ಹೆತ್ತವರಿಂದ ಮಗುವಿಗೆ ಸೋಂಕು ಹರಡುವುದನ್ನು ತಡೆಯಬಹುದಾಗಿದೆ.

ಹೆಚ್.ಐ.ವಿ/ಏಡ್ಸ್‌ನ ನಿರ್ದಿಷ್ಟ ಲಕ್ಷಣಗಳು: ಒಂದು ತಿಂಗಳಲ್ಲಿ ೧೦% ಗಿಂತ ಜಾಸ್ತಿ ತೂಕ ಕಡಿಮೆಯಾಗುವುದು. ಒಂದು ತಿಂಗಳವರೆಗೆ ನಿರಂತರವಾಗಿ ಭೇದಿಯಾಗುವುದು. ಒಂದು ತಿಂಗಳವರೆಗೆ ಸತತವಾಗಿ ಜ್ವರ ಬರುವುದು. ಕ್ಷಯದ ಸೋಂಕು ತಗುಲುವುದು. ಬಾಯಿ, ಗಂಟಲು ಮತ್ತು ಅನ್ನನಾಳಗಳಲ್ಲಿ ಬಿಳಿಪೊರೆ ಹುಣ್ಣುಗಳಾಗುವುದು. ನ್ಯೂಮೋನಿಯಾ ಸೋಂಕು ತಗುಲುವುದು. ಮೆದುಳಿಗೆ ಸೋಂಕಾಗುವುದು. ದೃಷ್ಟಿ ಕಡಿಮೆಯಾಗುವುದು. ಚರ್ಮಕ್ಕೆ ಇತರೇ ಸೋಂಕು ತಗುಲುವುದು.

ಹೆಚ್.ಐ.ವಿ/ಏಡ್ಸ್‌ಗೆ ಚಿಕಿತ್ಸೆ: ಹೆಚ್.ಐ.ವಿ/ಏಡ್ಸ್‌ಗೆ ಚಿಕಿತ್ಸೆ ಇದೆ, ಆದರೆ ಸಂಪೂರ್ಣ ಗುಣ ಸಾಧ್ಯವಿಲ್ಲ. ಎ.ಆರ್.ಟಿ ಚಿಕಿತ್ಸೆ ಜೀವಿತಾವಧಿ ಮತ್ತು ಜೀವನ ಗುಣಮಟ್ಟವನ್ನು ಸುಧಾರಿಸುತ್ತದೆ. ಎ.ಆರ್.ಟಿ ಚಿಕಿತ್ಸೆ ಜೀವನ ಪೂರ್ತಿ ಮುಂದುವರೆಸಬೇಕು. ಹೆಚ್‌ಐವಿ ವಿರುದ್ಧ ಈವರೆಗೆ ಯಾವುದೇ ಲಸಿಕೆ ಕಂಡುಹಿಡಿದಿಲ್ಲ. ನಕಲಿ ಚಿಕಿತ್ಸಕರು, ಹೆಚ್‌ಐವಿಯನ್ನು ಗುಣಪಡಿಸುತ್ತೇವೆಂದು ಸುಳ್ಳು ಭರವಸೆ ನೀಡುವವರನ್ನು ದೂರವಿಡಿ. ತಪ್ಪದೆ ಎ.ಆರ್.ಟಿ ಚಿಕಿತ್ಸೆಯನ್ನು ಪಡೆದು ಅತ್ಯುತ್ತಮ ಜೀವನವನ್ನು ಅಳವಡಿಸಿಕೊಂಡರೆ ಆರೋಗ್ಯಕರ ಜೀವನವನ್ನು ನಡೆಸಬಹುದು.

ಹೆಚ್.ಐ.ವಿ/ಏಡ್ಸ್ ಕಾಯ್ದೆಯು ೨೦೧೮ ರ ಸೆಪ್ಟೆಂಬರ್ ೧೦ ರಂದು ಜಾರಿಗೆ ಬಂದಿತು. ಸೋಂಕಿನ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಈ ಕಾಯ್ದೆಯ ಮುಖ್ಯ ಉದ್ದೇಶ. ಹೆಚ್‌ಐವಿ ಸೋಂಕು ಹಾಗೂ ಸೋಂಕಿತರಿಗೆ ಯಾವುದೇ ಕ್ಷೇತ್ರಗಳಲ್ಲಿ ಸೇವೆಗಳನ್ನು ನೀಡುವಲ್ಲಿ ನಿರಾಕರಣೆ, ಕಳಂಕ ತಾರತಮ್ಯ ಮಾಡುವಂತಿಲ್ಲ. ಹೆಚ್‌ಐವಿ ಸೋಂಕಿತರಿಗೆ ಸಂವಿಧಾನಾತ್ಮಕವಾದ ಎಲ್ಲಾ ಹಕ್ಕುಗಳೂ ಇದೆ. ಹೆಚ್‌ಐವಿ ಸೋಂಕಿತರ ವಿರುದ್ಧ ತಾರತಮ್ಯಕ್ಕೆ ದಂಡ ವಿಧಿಸಲಾಗುತ್ತದೆ. ಯಾವುದೇ ವ್ಯಕ್ತಿಯ ಹೆಚ್‌ಐವಿ ಸ್ಥಿತಿಗತಿಯ ಕುರಿತು ಲಿಖಿತವಾಗಿ ಬರವಣಿಗೆ ಸಂವಹನ ಚಿಹ್ನೆ ಮುಖಾಂತರ ಪ್ರಕಟಣೆ, ಪ್ರಚಾರ ಮಾಡಬಾರದು. ಮಾಡಿದಲ್ಲಿ ಕಾನೂನಾತ್ಮಕವಾಗಿ ಶಿಕ್ಷಾರ್ಹ ಅಪರಾಧ. ಹೆಚ್‌ಐವಿ ಸೋಂಕಿನ ಸ್ಥಿತಿಯ ಕುರಿತು ವ್ಯಕ್ತಿಯ ಅನುಮತಿಯಿಲ್ಲದೆ ಇತರರಿಗೆ ತಿಳಿಸುವಂತಿಲ್ಲ. ಕಾನೂನಿನ ಉಲ್ಲಂಘನೆಯಾದಲ್ಲಿ ೨ ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ೧ ಲಕ್ಷಕ್ಕೂ ಮೀರಿದ ಜುಲ್ಮಾನೆ ವಿಧಿಸಲಾಗುವುದು.

ವಿಶ್ವ ಆರೋಗ್ಯ ಸಂಸ್ಥೆ ಅಂಕಿ ಅಂಶದ ಪ್ರಕಾರ ಪ್ರಪಂಚದಲ್ಲಿ ಒಟ್ಟು ಸುಮಾರು ೩೯.೦ ಮಿಲಿಯನ್ ಹೆಚ್‌ಐವಿ ಸೋಂಕಿತರು ಇದ್ದಾರೆ. ೧.೮ ಮಿಲಿಯನ್ ಜನರು ಹೊಸದಾಗಿ ಸೋಂಕಿಗೆ ತುತ್ತಾಗುತ್ತಿದ್ದಾರೆ. ೨೦೦೨ ರಿಂದ ೨೦೧೬ ರ ಮಧ್ಯದ ಹೊಸ ಹೆಚ್‌ಐವಿ ಸೋಂಕಿತರಲ್ಲಿ ೩೯% ಇಳಿಕೆ ಕಂಡು ಬಂದಿದೆ. ೨೦.೯ ಮಿಲಿಯನ್ ಜನರು ಹೆಚ್‌ಐವಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಭಾರತದಲ್ಲಿ ಒಟ್ಟು ಸುಮಾರು ೨೩.೪೯ ಲಕ್ಷ ಜನರು (೦.೨೨%) ಹೆಚ್‌ಐವಿ ಸೋಂಕಿಗೆ ಒಳಗಾಗಿದ್ದಾರೆ. ಅದರಲ್ಲಿ ಸುಮಾರು ೬೯.೨೨ ಸಾವಿರ ಹೊಸದಾಗಿ ಸೋಂಕಿಗೆ ತುತ್ತಾಗಿದ್ದಾರೆ.

ಕರ್ನಾಟಕದಲ್ಲಿ ೨.೬೯ ಲಕ್ಷ ಸೋಂಕಿತರು ಇದ್ದಾರೆ. ಅತಿ ಹೆಚ್ಚು ಹೆಚ್‌ಐವಿ ಸೋಂಕಿತರನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕ ೯ನೇ ಸ್ಥಾನದಲ್ಲಿದೆ. ಕರ್ನಾಟಕ ರಾಜ್ಯದಲ್ಲಿ ಒಟ್ಟು ೩೩೦೪ ಐಸಿಟಿಸಿ ಕೇಂದ್ರಗಳಿದ್ದು ೨೦೨೨-೨೩ ರಲ್ಲಿ ೩೩,೧೬,೪೪೨ ಸಾಮಾನ್ಯ ಜನರನ್ನು ಹೆಚ್‌ಇಐವಿ ಪರೀಕ್ಷೆಗೊಳಪಡಿಸಿದ್ದು ಒಟ್ಟು ೧೨೮೦೨ (೦.೩೯%) ಸೋಂಕಿತರನ್ನು ಪತ್ತೆ ಹಚ್ಚಲಾಗಿದೆ.

RELATED ARTICLES
- Advertisment -
Google search engine

Most Popular