ಮೈಸೂರು: ಮಹಾ ಶಿವರಾತ್ರಿ ಪ್ರಯುಕ್ತ ಅರಮನೆಯ ಆವರಣದಲ್ಲಿರುವ ತ್ರಿನೇತ್ರೇಶ್ವರ ಸ್ವಾಮಿ ದೇವಸ್ಥಾನಕ್ಕೆ ಪ್ರತಿವರ್ಷದಂತೆ ಜಿಲ್ಲಾ ಖಜಾನೆಯಿಂದ ಸೂಕ್ತ ಭದ್ರತೆಯೊಂದಿಗೆ ಚಿನ್ನದ ಕೊಳಗವನ್ನು ತರಲಾಯಿತು. ಚಾಮುಂಡಿ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಿ.ರೂಪ ಮತ್ತು ಅರಮನೆ ಆಡಳಿತ ಮಂಡಳಿ ಸಿಬ್ಬಂದಿ ಸಮ್ಮುಖದಲ್ಲಿ ಸುಮಾರು 11 ಕೆ.ಜಿ ಇರುವ ಶುದ್ದ ಚಿನ್ನದ ಕೊಳಗವನ್ನು ದೇವಾಲಯದ ಅರ್ಚಕರಿಗೆ ಹಸ್ತಾಂತರ ಮಾಡಲಾಯಿತು.
ಎರಡನೇ ಶನಿವಾರ ರಜೆ ಇರುವ ಕಾರಣ ಒಂದು ದಿನ ಮುಂಚಿತವಾಗಿಯೇ ಹಸ್ತಾಂತರ ಮಾಡಲಾಯಿತು. ಭಾನುವಾರ ದೇಶಾದ್ಯಂತ ಮಹಾ ಶಿವರಾತ್ರಿ ಪ್ರಯುಕ್ತ ಭಾನುವಾರ ತ್ರಿನೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ಆರಂಭವಾಗಿ ಸೋಮವಾರ ಬೆಳಗ್ಗೆ 11 ಗಂಟೆವರೆಗೂ ದರ್ಶನಕ್ಕೆ ಅವಕಾಶ ಇರುತ್ತದೆ.1953 ರಲ್ಲಿ ಜಯ ಚಾಮರಾಜ ಒಡೆಯರ್ ಅವರಿಗೆ ಗಂಡು ಸಂತಾನ ಪ್ರಾಪ್ತಿಯಾದ ಹಿನ್ನೆಲೆ ಅರಮನೆ ಆವರಣದಲ್ಲಿರುವ ತ್ರಿನೇಶ್ವರ ಸ್ವಾಮಿ ದೇವಸ್ಥಾನ, ನಂಜನಗೂಡಿನ ನಂಜುಂಡೇಶ್ವರ ಸ್ವಾಮಿ ದೇವಸ್ಥಾನ ಮತ್ತು ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನಗಳಿಗೆ 1954 ರಲ್ಲಿ ಚಿನ್ನದ ಕೊಳಗದ ವಿಗ್ರಹಗಳನ್ನು ದೇಣಿಗೆಯಾಗಿ ನೀಡಿದ್ದರು.ತ್ರಿನೇಶ್ವರ ಸ್ವಾಮಿ ದೇವಸ್ಥಾನಕ್ಕೆ ನೀಡಿರುವ ಕೊಳಗ ಶುದ್ದ ಅಪರಂಜಿ ಚಿನ್ನದಿಂದ ಮಾಡಿರುವ ಶಿವನು ಹಸನ್ಮುಖಿಯಾಗಿರುವ ಜಟೆಯಲ್ಲಿ ಗಂಗೆಯ ಧರಿಸಿರು ವಿಗ್ರಹ ನೋಡಲು ಮನಮೋಹಕವಾಗಿದೆ.
ವರ್ಷದಲ್ಲಿ ಒಮ್ಮೆ ಮಾತ್ರ ಈ ಚಿನ್ನದ ಕೊಳಗವನ್ನು ಶಿವನ ಲಿಂಗಕ್ಕೆ ಧಾರಣೆ ಮಾಡಿ ದರ್ಶನಕ್ಕೆ ಅವಕಾಶ ಮಾಡಿಕೊಡುಲಾಗುತ್ತದೆ.ಶಿವರಾತ್ರಿಯಂದು ಮುಂಜಾನೆಯಿಂದಲೇ ದೇವಾಲಯಕ್ಕೆ ಭಕ್ತರು ಬಂದು ದರ್ಶನ ಪಡೆಯುತ್ತಾರೆ. ಶಿವನಿಗೆ ವಿಶೇಷ ಅಭಿಷೇಕಗಳು,ಆರಾಧನೆ,ಪ್ರಾರ್ಥನೆ, ಸಹಸ್ರನಾಮ ಪಾರಾಯಣ,ಜಾಗರಣೆಯೊಂದಿಗೆ ಹಲವು ಧಾರ್ಮಿಕ ಭಜನೆ, ಭಕ್ತಿಗೀತೆಗಳ ಗಾನ ಸುಧೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ದೇವಾಲಯದ ಆವರಣದಲ್ಲಿ ಜರುಗುತ್ತದೆ.
ಕೊಳಗ ಹಸ್ತಾಂತರದ ಸಂದರ್ಭದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಡಿ.ರೂಪ,ಪ್ರಧಾನ ಅರ್ಚಕ ಶ್ರೀಹರಿ,ಸ್ಥಾನಿಕರಾದ ವೆಂಕಟೇಶ್ ಸೇರಿದಂತೆ ಅರಮನೆ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ಮುಂತಾದವರಿದ್ದರು



