ವರದಿ :ಸ್ಟೀಫನ್ ಜೇಮ್ಸ್
ರಾಜ್ಯ ಸರ್ಕಾರವು ಮಹಿಳಾ ಉದ್ಯೋಗಿಗಳ ಆರೋಗ್ಯ ಮತ್ತು ಸಬಲೀಕರಣದತ್ತ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಖಾಸಗಿ ಹಾಗೂ ಸರ್ಕಾರಿ ವಲಯದ ಎಲ್ಲಾ ಉದ್ದಿಮೆಗಳಲ್ಲಿ ಕೆಲಸ ಮಾಡುವ ಮಹಿಳಾ ಕಾರ್ಮಿಕರಿಗೆ ಈಗ ತಿಂಗಳಿಗೊಮ್ಮೆ ಋತುಚಕ್ರ ಸಮಯದಲ್ಲಿ ಒಂದು ದಿನ ವೇತನ ಸಹಿತ ರಜೆ ನೀಡಲು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಋತುಚಕ್ರ ರಜೆ ನೀತಿ –2025 ಎನ್ನುವ ಈ ಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಂಗೀಕಾರ ದೊರೆತಿತ್ತು.
ಈ ನೀತಿ ರಾಜ್ಯದ ಸಾವಿರಾರು ಮಹಿಳಾ ಕಾರ್ಮಿಕರಿಗೆ ದೊಡ್ಡ ರಿಲೀಫ್ ನೀಡುವಂತಾಗಿದೆ. ಮಹಿಳೆಯರ ಆರೋಗ್ಯ, ಅವರ ಶಾರೀರಿಕ ಮತ್ತು ಮಾನಸಿಕ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ. ಕಾರ್ಮಿಕ ಇಲಾಖೆ ಹಲವು ತಿಂಗಳುಗಳ ಅಧ್ಯಯನ, ಚರ್ಚೆ ಹಾಗೂ ತಜ್ಞರ ಸಮಾಲೋಚನೆಗಳ ಬಳಿಕ ಈ ನೀತಿಯನ್ನು ರೂಪಿಸಿದೆ. ಕ್ರೈಸ್ಟ್ ವಿಶ್ವವಿದ್ಯಾಲಯದ ಕಾನೂನು ವಿಭಾಗದ ಮುಖ್ಯಸ್ಥೆ ಸಪ್ನಾ ಎಸ್ ಅವರ ನೇತೃತ್ವದಲ್ಲಿ ರಚಿಸಲಾದ 18 ಸದಸ್ಯರ ಸಮಿತಿ ನೀಡಿದ ಶಿಫಾರಸಿನ ಆಧಾರದಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ.
ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ಅವರ ಪ್ರಯತ್ನದಿಂದ ಈ ಮಹತ್ವದ ಯೋಜನೆ ಸಕಾರ್ಯರೂಪಕ್ಕೆ ಬಂದಿದೆ. ಮಹಿಳಾ ಕಾರ್ಮಿಕರ ಹಿತದೃಷ್ಟಿಯಿಂದ ಹಲವು ಹೊಸ ಯೋಜನೆಗಳನ್ನು ತರಲು ಮುಂಚೂಣಿಯಲ್ಲಿದ್ದ ಅವರು, ಋತುಚಕ್ರ ರಜೆ ನೀತಿಯನ್ನು ಜಾರಿಗೊಳಿಸಲು ದೇಶದ ವಿವಿಧ ರಾಜ್ಯಗಳ ಮಾದರಿಗಳನ್ನು ಅಧ್ಯಯನ ಮಾಡಿ ಸೂಕ್ತ ಮಾರ್ಗಸೂಚಿಗಳನ್ನು ರೂಪಿಸಿದ್ದಾರೆ.
ಸರ್ಕಾರದ ಈ ನಿರ್ಧಾರಕ್ಕೆ ರಾಜ್ಯದ ಮಹಿಳಾ ಉದ್ಯೋಗಿಗಳು ತೀವ್ರ ಹರ್ಷ ವ್ಯಕ್ತಪಡಿಸಿದ್ದಾರೆ. ದೀರ್ಘಕಾಲದ ಬೇಡಿಕೆಯಾದ ಈ ಕ್ರಮ ಮಹಿಳೆಯರ ಆರೋಗ್ಯದ ಕಾಳಜಿ ಹಾಗೂ ಅವರ ಕೆಲಸದ ಸ್ಥಳದಲ್ಲಿ ಗೌರವ ಮತ್ತು ಸಮಾನತೆಯ ವಾತಾವರಣ ನಿರ್ಮಾಣಕ್ಕೆ ಸಹಾಯಕವಾಗಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್ , ರಾಜ್ಯದ ಮಹಿಳಾ ಉದ್ಯೋಗಿಗಳ ಆರೋಗ್ಯ ರಕ್ಷಣೆಯ ಜೊತೆಗೆ ಅವರ ಮನೋಸ್ಥೈರ್ಯವನ್ನು ಬಲಗೊಳಿಸುವ ಉದ್ದೇಶದಿಂದ ಋತುಚಕ್ರ ರಜೆ ನೀತಿಯನ್ನು ಜಾರಿಗೊಳಿಸಲಾಗಿದೆ. ಈ ಕ್ರಮ ಮಹಿಳಾ ಸಬಲೀಕರಣದ ದಾರಿಯಲ್ಲಿ ನಮ್ಮ ಸರ್ಕಾರವನ್ನು ದೇಶಕ್ಕೆ ಮಾದರಿಯಾಗಿ ತೋರಿಸಿದೆ ಎಂದು ಹೇಳಿದ್ದಾರೆ.



