ರಾಯ್‌ಪುರ್: ಭಾಷಾವಾರು ಕಿತ್ತಾಟಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ತೀವ್ರ ಬೇಸರ ವ್ಯಕ್ತಪಡಿಸಿದ್ದು, ಭಾಷೆಗಳು ಸಂವಹನ ಮಾಧ್ಯಮವಾಗಿದ್ದು, ಎಲ್ಲ ಭಾಷೆಯನ್ನು ಗೌರವಿಸುವ ಮೂಲಕ ಭಾಷಾ ಹಗೆತನವನ್ನು ತೊರೆಯಬೇಕುಎಂದು ಸಲಹೆ ನೀಡಿದ್ದಾರೆ.
ಈ ಕುರಿತು ಛತ್ತೀಸ್‌ಗಢ ರಾಜಧಾನಿ ರಾಯಪುರ್‌ನಲ್ಲಿ ಮಾತನಾಡಿದ ಅವರು, ನಾವು ಯುರೋಪಿಯನ್ನರಲ್ಲ, ನಾವು ಮಧ್ಯಪ್ರಾಚ್ಯದವರಲ್ಲ, ನಾವು ಚೀನಾ ಅಥವಾ ಜಪಾನ್‌ನವರಲ್ಲ. ನಾವು ಭಾರತೀಯರಾಗಿದ್ದು, ಭಾರತವು ಹಲವು ಭಾಷೆಗಳ ತವರೂರಾಗಿದೆ. ಇಲ್ಲಿನ ಭಾಷಾ ವೈವಿಧ್ಯತೆ ಜಗತ್ತಿನ ಬೇರೆಲ್ಲೂ ಕಾಣಸಿಗುವುದಿಲ್ಲ. ಅಲ್ಲದೆ ಭಾಷೆಗಳು ನಮ್ಮ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿವೆ ಎಂದು ಹೇಳಿದರು.
ಇನ್ನೂ ನಾವು ಮನೆಯಲ್ಲಿ ನಮ್ಮ ಮಾತೃಭಾಷೆಯಲ್ಲಿ ಮಾತನಾಡಬೇಕು. ಆದರೆ ವ್ಯಕ್ತಿಯೊಬ್ಬ ಬೇರೊಂದು ರಾಜ್ಯಕ್ಕೆ ವಲಸೆ ಹೋದರೆ, ಆ ರಾಜ್ಯದ ಭಾಷೆಯನ್ನು ಕಲಿಯಬೇಕು. ಏಕೆಂದರೆ ಎಲ್ಲಾ ಭಾಷೆಗಳು ರಾಷ್ಟ್ರೀಯ ಭಾಷೆಗಳಾಗಿದ್ದು, ಅವೆಲ್ಲವೂ ಸಮಾನ ಪ್ರಾತಿನಿಧ್ಯ ಹೊಂದಿವೆ ಎಂದರು.
ಕರ್ನಾಟಕ ದ್ವಿಭಾಷಾ ನೀತಿ ಚರ್ಚೆ ನಡೆಯುತ್ತಿರುವುದು ಇಲ್ಲಿ ಉಲ್ಲೇಖನೀಯ. ಭಾರತ ಎಲ್ಲಾ ಭಾಷೆಗಳ ಮೂಲ ಒಂದೇ ಆಗಿದೆ. ಅವುಗಳಲ್ಲಿ ಭಿನ್ನ ಶಬ್ಧಗಳಿವೆ, ಆದರೆ ಭಾವ ಒಂದೇ. ಭಾರತೀಯ ಭಾಷೆಗಳು ಭಾರತವನ್ನು ಒಗ್ಗೂಡಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿವೆ. ಇಂತಹ ಮಹಾನ್ ಇತಿಹಾಸವಿರುವ ಭಾಷೆಗಳನ್ನು ನಾವು ನಮ್ಮ ಸ್ವಾರ್ಥಕ್ಕಾಗಿ ವಿರೋಧಿಸುವುದಾಗಲಿ ಅಥವಾ ಭಾಷೆ ಭಾಷೆಗಳ ನಡುವೆ ಕಿಚ್ಚು ಹಚ್ಚುವುದಾಗಲಿ ಮಾಡುವುದು ಸರಿಯಲ್ಲ ಎಂದು ಮೋಹನ್ ಭಾಗವತ್ ಖಡಕ್ ಆಗಿ ಹೇಳಿದರು.
ಅಲ್ಲದೆ ದೇಶದ ಯುವಜನತೆ ಭಾರತೀಯ ಸಂಸ್ಕೃತಿಯಿಂದ ವಿಮುಖರಾಗುತ್ತಿದ್ದಾರೆ ಎಂದು ಎಚ್ಚರಿಸಿದ ಮೋಹನ್ ಭಾಗವತ್, ನಮಗೆ ಭಾಷೆ ಹೇಗೆ ಮುಖ್ಯವೋ ನಮ್ಮ ಸಂಸ್ಕೃತಿಯ ಉಳಿವೂ ಕೂಡ ಅಷ್ಟೇ ಮುಖ್ಯ. ಯುವಕರು ದಿನನಿತ್ಯ ಭಾರತೀಯ ಉಡುಗೆ ತೊಡುವುದು ಸಾಧ್ಯವಿಲ್ಲವಾದರೂ, ಹಬ್ಬದ ದಿನದಲ್ಲಾದರೂ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಉಡುಗೆ ತೊಡಬೇಕು ಎಂದು ಸಲಹೆ ನೀಡಿದರು.
ಭಾರತ ಎಲ್ಲಾ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಸಾಧಿಸಬೇಕು. ವಿದೇಶಿ ವಸ್ತುಗಳ ಬಳಕೆ ಕಡಿಮೆ ಮಾಡಿ, ದೇಶೀಯ ಉತ್ಪನ್ನಗಳ ಬಳಕೆಯನ್ನು ಹೆಚ್ಚಿಸಬೇಕು. ಹಾಗೆಂದ ಮಾತ್ರಕ್ಕೆ ವಿದೇಶದಿಂದ ವಸ್ತುಗಳನ್ನು ಆಮದು ಮಾಡಿಕೊಳ್ಳಲೇಬಾರದು ಎಂದರ್ಥವಲ್ಲ. ದೇಶೀಯ ಉದ್ಯಮಕ್ಕೆ ಅನುಕೂಲವಾಗುವ ರೀತಿಯಲ್ಲಿ ನಾವು ವ್ಯಾಪಾರ ನೀತಿಗಳನ್ನು ರೂಪಿಸಬೇಕು ಎಂದು ಹೇಳಿದರು.
ವಿನೋಭಾ ಬಾವೆ ಹೇಳಿದಂತೆ ಸ್ವದೇಶಿ ಎಂದರೆ ಸ್ವಾವಲಂಬನೆ ಮತ್ತು ಅಹಿಂಸೆ. ಹೀಗಾಗಿ ನಾವು ಸ್ವಾವಲಂಬಿಗಳಾಗುವತ್ತ ಹೆಚ್ಚಿನ ಗಮನಹರಿಸಬೇಕು. ನಾವೂ ಬೆಳೆದು ಇತರರನ್ನೂ ಬೆಳೆಸುವ ಉದಾರ ಮನೋಭಾವನೆಯನ್ನು ನಾವು ಬೆಳೆಸಿಕೊಳ್ಳಬೇಕು ಎಂದು ನುಡಿದರು.



