ಮೈಸೂರು : ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ಬಂದಾಗಲೆಲ್ಲಾ ಕುರುಬರ ನೆನಪಾಗುತ್ತದೆ. ಇದೀಗ ಸಿದ್ದರಾಮಯ್ಯಗೆ ಸಂಕಷ್ಟ ಬಂದಿದೆ. ಹಾಗಾಗಿ ಕುರುಬ ಸಮುದಾಯವನ್ನು ಎಸ್ ಟಿ ಸಮುದಾಯಕ್ಕೆ ಸೇರಿಸುವುದಾಗಿ ಹೇಳುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಟೀಕಿಸಿದ್ದಾರೆ.
ಮಂಗಳವಾರ ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಮನಸ್ಸು ಮಾಡಿದ್ದರೆ ಎಂದೋ ಈ ಕೆಲಸ ಮಾಡಬಹುದಿತ್ತು ಎಂದರು.
ಕುರುಬ ಸಮುದಾಯಕ್ಕೆ ಯಾವುದೇ ಕೊಡುಗೆ ನೀಡದ ಸಿದ್ದರಾಮಯ್ಯ, ಕುರುಬ ಸಮುದಾಯದ ನಾಯಕರನ್ನು ವ್ಯವಸ್ಥಿತವಾಗಿ ತುಳಿದರು. ಕುರುಬ ನಾಯಕರು ಬೆಳೆಯಲು ಸಿದ್ದರಾಮಯ್ಯ ಬಿಡಲಿಲ್ಲ. ಹಿಂದುಳಿದ ವರ್ಗಗಳ ನಾಯಕ ಎಂದು ಹೇಳುವ ಸಿದ್ದರಾಮಯ್ಯ ಈ ವರ್ಗಕ್ಕೆ ಯಾವುದೇ ಕೊಡುಗೆ ನೀಡಲಿಲ್ಲ, ಹೋರಾಟ ಮಾಡಲಿಲ್ಲ ಎಂದು ಎಚ್. ವಿಶ್ವನಾಥ್ ಟೀಕಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಬರೀ ಬೊಗಳೆ ಬಿಟ್ಟುಕೊಂಡು ಓಡಾಡ್ತಿದ್ದಾರೆ. ಹಿಂದುಳಿದ ವರ್ಗಗಳ ಬಗ್ಗೆ ಸಿದ್ದರಾಮಯ್ಯಗೆ ಕಾಳಜಿಯಿಲ್ಲ. ನಾಯಕ ಸಮುದಾಯವನ್ನು ಎಸ್ ಟಿ ಸಮುದಾಯಕ್ಕೆ ಸೇರಿಸಿದ್ದು ಹೆಚ್ ಡಿ ದೇವೇಗೌಡರು. ಈಗ ಕಾಗಿನೆಲೆ ಮಠಾಧಿಪತಿಗಳನ್ನು ಸಿದ್ದರಾಮಯ್ಯ ಮುಂದಕ್ಕೆ ಬಿಡ್ತಾರೆ. ಆದರೆ ಸ್ವಾಮೀಜಿಗಳನ್ನು ಸಿದ್ದರಾಮಯ್ಯ ಪೀಠಾಧಿಪತಿಯನ್ನಾಗಿ ಮಾಡಿಲ್ಲ. ನಿಮ್ಮನ್ನು ಪೀಠಾಧಿಪತಿ ಮಾಡಿದ್ದು ವಿಶ್ವನಾಥ್. ಮಠಕ್ಕೂ ಸಿದ್ದರಾಮಯ್ಯಗೂ ಯಾವುದೇ ಸಂಬಂಧವಿಲ್ಲ. ಮಠಾಧಿಪತಿಗಳೇನು ಸಿದ್ದರಾಮಯ್ಯ ಅಥವಾ ಕಾಂಗ್ರೆಸ್ ಪಕ್ಷದ ಜೀತದಾಳುಗಳಲ್ಲ. ಮಠಾಧಿಪತಿಗಳು, ಸಿದ್ದರಾಮಯ್ಯ ಅಥವಾ ಕಾಂಗ್ರೆಸ್ ಪರವಾಗಿ ಬೀದಿಗಿಳಿದರೆ ನಿಮ್ಮ ತಲೆದಂಡವಾಗಲಿದೆ. ನಿಮ್ಮನ್ನು ಪೀಠದಿಂದ ಕೆಳಗಿಳಿಸಬೇಕಾಗುತ್ತದೆ. ಕುರುಬರ ಹುಡುಗರಿಗೆ ಸಿದ್ದರಾಮಯ್ಯ ಉತ್ತಮ ಭವಿಷ್ಯ ರೂಪಿಸಲಿಲ್ಲ ಎಂದು ಎಚ್. ವಿಶ್ವನಾಥ್ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದೇ ವೇಳೆ ದಸರಾ ಉದ್ಘಾಟನೆ ವಿವಾದದ ಬಗ್ಗೆ ಮಾತನಾಡಿದ ಅವರು, ಬಾನು ಮುಷ್ತಾಕ್ ದಸರಾ ಮಹೋತ್ಸವ ಉದ್ಘಾಟನೆಗೆ ಹೈಕೋರ್ಟ್ ಹಸಿರು ನಿಶಾನೆ ತೋರಿರುವುದು ಸ್ವಾಗತಾರ್ಹ. ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡುವುದನ್ನು ವಿರೋಧಿಸಿ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದರು. ಆದರೀಗ ನ್ಯಾಯಾಲಯ ಅನುಮತಿ ನೀಡಿದೆ ಎಂದರು.