ವರದಿ: ಸತೀಶ್ ಆರಾಧ್ಯ
ಪಿರಿಯಾಪಟ್ಟಣ: ನಾವೆಲ್ಲ ಜಾತಿ ಧರ್ಮ ಮರೆತು ಒಂದಾದಾಗ ಮಾತ್ರ ಸ್ವಾತಂತ್ರ್ಯ ಹೋರಾಟಗಾರರ ಕನಸಿನ ಭಾರತ ನಿರ್ಮಿಸಲು ಸಾಧ್ಯ ಎಂದು ರಾವಂದೂರು ಕೆಪಿಎಸ್ ಕಾಲೇಜಿನ ಆಂಗ್ಲಭಾಷೆ ಉಪನ್ಯಾಸಕರಾದ ಲಕ್ಷ್ಮಿಕಾಂತ್ ತಿಳಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.
ಭಾರತ ಮಾತೆಯ ಮಕ್ಕಳಾದ ನಾವೆಲ್ಲ ಎಂದಿಗೂ ಪರಸ್ಪರರ ಧರ್ಮ ಭಾಷೆ ಹಾಗೂ ಸಂಸ್ಕೃತಿಯನ್ನು ಗೌರವಿಸುವ ಅಭ್ಯಾಸ ರೂಢಿಸಿಕೊಳ್ಳಬೇಕು, ಸಾಮರಸ್ಯದಿಂದ ಬಾಳಿದರೆ ಮಾತ್ರ ನಾವು ಶತ್ರುಗಳನ್ನು ಸೆದೆಬಡಿಯಲು ಸಾಧ್ಯವಿದೆ ಅಲ್ಲದೇ ನಮ್ಮ ಪೂರ್ವಜರು ನಮಗೆ ಸ್ವಾತಂತ್ರ್ಯವನ್ನು ತಂದುಕೊಟ್ಟಿರುವುದು ಇಂದು ನಾವು ಧರ್ಮ ಭಾಷೆಗಾಗಿ ಹೋರಾಡಲಿ ಎಂದಲ್ಲ ಬದಲಾಗಿ ಭಾರತದಲ್ಲಿ ಒಗ್ಗಟ್ಟಿನಿಂದ ಬಾಳಲಿ ಎಂದು,
ಭಾರತ ವಿಶ್ವದ ಆರ್ಥಿಕತೆಯಲ್ಲಿ ನಾಲ್ಕನೇ ಬಲಿಷ್ಠ ರಾಷ್ಟ್ರವಾಗಿದ್ದು ರಕ್ಷಣಾ ವಿಜ್ಞಾನ ಮತ್ತು ತಂತ್ರಜ್ಞಾನ ಬಾಹ್ಯಾಕಾಶ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು ಇದು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕನಸನ್ನು ನನಸಾಗಿಸಿ ಮತ್ತೊಮ್ಮೆ ಭಾರತ ಗತಕಾಲದ ಸುವರ್ಣಯುಗ ನೆನಪಿಸುತ್ತಿದೆ, ಪೆಹಲ್ಗಾಂ ದಾಳಿಯ ನಂತರ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಶತ್ರು ರಾಷ್ಟ್ರಕ್ಕೆ ಸೆಡ್ಡು ಹೊಡೆದು ವಿಜಯ ಸಾಧಿಸುವುದರ ಮೂಲಕ ಭಾರತ ರಕ್ಷಣಾ ಕ್ಷೇತ್ರದಲ್ಲಿ ವಿಶ್ವದಲ್ಲೇ ಬಲಿಷ್ಠ ರಾಷ್ಟ್ರ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದರು.

ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರಾದ ನಿತಿನ್ ವೆಂಕಟೇಶ್ ಅವರು ಮಾತನಾಡಿ ಯುವ ಪೀಳಿಗೆಯು ದೇಶದ ಅಭಿವೃದ್ಧಿ ಮತ್ತು ರಕ್ಷಣೆ ಬಗ್ಗೆ ಚಿಂತಿಸಬೇಕು, ದೇಶದಲ್ಲಿನ ಭಯೋತ್ಪಾದನೆಯನ್ನು ಹೋಗಲಾಡಿಸಿ ವಿದೇಶಿ ವಸ್ತುಗಳ ವ್ಯಾಮೋಹದಿಂದ ದೂರವಿರಬೇಕು ಆಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ, ಸ್ವತಂತ್ರ ಹೋರಾಟಕ್ಕಾಗಿ ಶ್ರಮಿಸಿದ ಮಹನೀಯರನ್ನು ಪ್ರತಿಯೊಬ್ಬರು ಸ್ಮರಿಸಬೇಕು ಎಂದರು.
ತಹಶೀಲ್ದಾರ್ ನಿಸರ್ಗ ಪ್ರಿಯ ಅವರು ಧ್ವಜಾರೋಹಣ ನೆರವೇರಿಸಿ ಧ್ವಜ ಸಂದೇಶ ನೀಡಿದರು, ಪೋಲಿಸರು ಹಾಗು ವಿದ್ಯಾರ್ಥಿಗಳು ನಡೆಸಿದ ಪಥ ಸಂಚಲನ ಗಮನ ಸೆಳೆಯಿತು, ವಿವಿಧ ಕ್ಷೇತ್ರ ಗಣ್ಯರನ್ನು ಸನ್ಮಾನಿಸಲಾಯಿತು, ವಿವಿಧ ಶಾಲಾ ವಿದ್ಯಾರ್ಥಿಗಳು ನಡೆಸಿಕೊಟ್ಟ ದೇಶಭಕ್ತಿ ಸಾಂಸ್ಕೃತಿಕ ಕಾರ್ಯಕ್ರಮ ರಂಜಿಸಿತು.

ಕಾರ್ಯಕ್ರಮದಲ್ಲಿ ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಲೋಕೇಶ್, ಪುರಸಭೆ ಸದಸ್ಯರಾದ ಮಂಜುನಾಥ್, ಮಂಜುಳಾ, ರವಿ, ರಾಜೇಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಶೇಖರ್, ಬಿಇಓ ರವಿ ಪ್ರಸನ್ನ, ಪೊಲೀಸ್ ವೃತ್ತ ನಿರೀಕ್ಷಕರಾದ ಗೋವಿಂದ್ ರಾಜ್, ದೀಪಕ್, ಪುರಸಭೆ ಮುಖ್ಯಧಿಕಾರಿ ಕೊಟ್ಟುಕತ್ತೀರಾ ಮುತ್ತಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಸಿ ಪ್ರಶಾಂತ್, ದೈಹಿಕ ಶಿಕ್ಷಣ ಪರೀಕ್ಷಕರ ರಮೇಶ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ವಿವಿಧ ಇಲಾಖೆ ಅಧಿಕಾರಿಗಳು ಪಟ್ಟಣದ ವಿವಿಧ ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಇದ್ದರು.