ಬೆಂಗಳೂರು: ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಮತ್ತೊಂದು ಮಹತ್ವದ ಸೇರ್ಪಡೆಯಾಗಿ ನಮ್ಮ ಮೆಟ್ರೋ ಪಿಂಕ್ ಲೈನ್‌ನ ಮೊದಲ ಹಂತ ಆಗಸ್ಟ್ 15ರಂದು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ರೈಲುಗಳ ಸಂಚಾರ ಆರಂಭಿಸಲು ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸುತ್ತಿದೆ.
ಪಿಂಕ್ ಲೈನ್ ಮೆಟ್ರೋಗೆ ಗಂಟೆಗೆ 90 ಕಿಲೋಮೀಟರ್ ವೇಗದಲ್ಲಿ ಸಂಚರಿಸಲು ಅನುಮತಿ ದೊರೆತಿದೆ. ಕೇಂದ್ರ ಸರ್ಕಾರದ ಸಂಶೋಧನಾ ವಿನ್ಯಾಸ ಮತ್ತು ಮಾನದಂಡಗಳ ಸಂಸ್ಥೆ ಈಗಾಗಲೇ ಅಧಿಕೃತ ವೇಗ ಪ್ರಮಾಣ ಪತ್ರ ನೀಡಿದ್ದು, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ನಡೆದ ಪ್ರಾಯೋಗಿಕ ಪರೀಕ್ಷೆಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ. ಇದೀಗ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರ ಅಂತಿಮ ಪರಿಶೀಲನೆ ಮತ್ತು ಅನುಮೋದನೆಗಾಗಿ ಕಾಯಲಾಗುತ್ತಿದೆ.
ಮೊದಲ ಹಂತದಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ 7.5 ಕಿ.ಮೀ ಉದ್ದದ ಎಲಿವೇಟೆಡ್ ಮಾರ್ಗವನ್ನು ಸಾರ್ವಜನಿಕರಿಗೆ ತೆರೆಯಲಾಗುತ್ತದೆ. ಈ ಮಾರ್ಗದಲ್ಲಿ ಕಾಳೇನ ಅಗ್ರಹಾರ, ಗೊಟ್ಟಿಗೆರೆ, ಹುಳಿಮಾವು, ಐಐಎಂಬಿ, ಜೆಪಿ ನಗರ 4ನೇ ಹಂತ ಹಾಗೂ ತಾವರೆಕೆರೆ ಸೇರಿ ಆರು ನಿಲ್ದಾಣಗಳಿವೆ. ಜಯದೇವ ಆಸ್ಪತ್ರೆ ಇಂಟರ್‌ಚೇಂಜ್ ನಿಲ್ದಾಣವು ವಿವಿಧ ಮಾರ್ಗಗಳ ನಡುವೆ ಸುಲಭ ಸಂಪರ್ಕ ಒದಗಿಸಲಿದೆ.
ಒಟ್ಟು 21.25 ಕಿ.ಮೀ ಉದ್ದದ ಪಿಂಕ್ ಲೈನ್‌ನಲ್ಲಿ 18 ನಿಲ್ದಾಣಗಳಿದ್ದು, 12 ಅಂಡರ್‌ಗ್ರೌಂಡ್ ಮತ್ತು 6 ಎಲಿವೇಟೆಡ್ ನಿಲ್ದಾಣಗಳು ಸೇರಿವೆ. ಈ ಮಾರ್ಗ ಕಾರ್ಯಾರಂಭಗೊಂಡ ಬಳಿಕ ಮೆಟ್ರೋ ಜಾಲದ ಉದ್ದ 103.6 ಕಿ.ಮೀ.ಗೆ ವಿಸ್ತರಿಸಲಿದ್ದು, ಬನ್ನೇರುಘಟ್ಟ ರಸ್ತೆಯ ಸಂಚಾರ ದಟ್ಟಣೆ ಹಾಗೂ ವಾಯುಮಾಲಿನ್ಯ ಕಡಿಮೆ ಮಾಡಲು ನೆರವಾಗಲಿದೆ. ಸಂಪೂರ್ಣ ಪಿಂಕ್ ಲೈನ್ ಈ ವರ್ಷದ ಅಂತ್ಯದೊಳಗೆ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ.



