ಕರಾವಳಿ ಎಂದರೆ ಸೌಂದರ್ಯ, ಜ್ಞಾನ, ಸಂಪತ್ತಿನ ಪರ್ವತ. ದೈವ, ದೇವಾಲಯ, ಶಕ್ತಿದೇವತೆಗಳ ಪ್ರವಾಸಿ ಕ್ಷೇತ್ರ. ವ್ಯಾಪಾರಿಗಳ ನಿಧಿ, ಪ್ರವಾಸಿಗರ ಸ್ವರ್ಗ. ಇಷ್ಟೆಲ್ಲಾ ವಿಶೇಷತೆ ಇರುವಾಗ ಈ ಭಾಗದ ಪ್ರವಾಸೋದ್ಯಮದಲ್ಲಿ ನಾವು ಯಾಕೆ ಹಿಂದುಳಿದಿದ್ದೇವೆ ಎಂಬುದು ಅರ್ಥವಾಗುತ್ತಿಲ್ಲ. ಈ ಭಾಗದ ಪ್ರವಾಸೋದ್ಯಮ ನೀತಿಗೆ ಜನಪ್ರತಿನಿಧಿಗಳು, ಉದ್ಯಮಿಗಳು, ಅಧಿಕಾರಿಗಳು ಸೇರಿದಂತೆ ಎಲ್ಲರ ಸಲಹೆಗಳನ್ನು ಸ್ವೀಕರಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಈ ಭಾಗದ ಅಭಿವೃದ್ಧಿಯೇ ನಮ್ಮ ಸಂಕಲ್ಪ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಮಂಗಳೂರಲ್ಲಿ ತಿಳಿಸಿದರು.
“ನಮ್ಮಲ್ಲಿ 320 ಕಿ ಮೀ ಕರಾವಳಿ ಪ್ರದೇಶವಿದೆ. ಇಲ್ಲಿ ಪ್ರಕೃತಿ ಸಂಪತ್ತಿನ ಜೊತೆಗೆ, ಈ ಭಾಗದ ಹಿರಿಯರು ದೇಶಕ್ಕೆ ಅನೇಕ ಬ್ಯಾಂಕುಗಳನ್ನು ಕೊಟ್ಟಿದ್ದಾರೆ. ಬ್ಯಾಂಕುಗಳಲ್ಲಿ ಶಿಸ್ತು ಕೊಟ್ಟ ಜನ ನೀವು. ಪ್ರಪಂಚದಾದ್ಯಂತ ಈ ಕರಾವಳಿ ಭಾಗದ ಜನ ಕೆಲಸ ಮಾಡುತ್ತಿದ್ದಾರೆ. ಇದು ಶೈಕ್ಷಣಿಕ ಕೇಂದ್ರವೂ ಆಗಿದೆ. ಇಲ್ಲಿರುವಷ್ಟು ಮೆಡಿಕಲ್, ಇಂಜಿನಿಯರ್, ಪಿಯುಸಿ ಕಾಲೇಜು ಬೇರೆ ಯಾವುದೇ ಜಿಲ್ಲೆಯಲ್ಲಿ ಇಲ್ಲ. ನೀವು ಹೆಚ್ಚು ಮಾನವ ಸಂಪನ್ಮೂಲವನ್ನು ತಯಾರು ಮಾಡುತ್ತಿದ್ದೀರಿ. ಆದರೂ ಈ ಭಾಗದ ಪ್ರತಿಭಾವಂತ ಜನರು ಬೆಂಗಳೂರು, ಮುಂಬೈ ಸೇರಿದಂತೆ ಪ್ರಪಂಚದ ಮೂಲೆ ಮೂಲೆಗೆ ಹೋಗುತ್ತಿದ್ದಾರೆ” ಎಂದು ತಿಳಿಸಿದರು.
“ಈ ಭಾಗದಲ್ಲಿ ಸುಂದರ ಸಮುದ್ರ ತೀರವಿದೆ. ಗೋವಾ ಹಾಗೂ ನಮಗೆ ಇರುವ ವ್ಯತ್ಯಾಸವೇನು? ಅಲ್ಲಿರುವ ಸೌಂದರ್ಯ ನಮ್ಮಲ್ಲೂ ಇವೆ. ಆದರೆ ಅವುಗಳನ್ನು ಬಳಸಿಕೊಳ್ಳುವಲ್ಲಿ ನಾವು ಎಡವಿದ್ದೇವೆ. ಏಳೆಂಟು ತಿಂಗಳ ಹಿಂದೆ ಸಚಿವ ಸಂಪುಟ ಸಭೆಯಲ್ಲಿ ಪ್ರವಾಸೋದ್ಯಮ ನೀತಿ ಬಗ್ಗೆ ಚರ್ಚೆ ಮಾಡಲಾಯಿತು. ಆಗ ಪ್ರವಾಸೋದ್ಯಮ ಅಂತಿಮ ನೀತಿಯನ್ನು ತಡೆ ಹಿಡಿಯುವಂತೆ ಹೇಳಿದೆ. ಕರಾವಳಿ ಭಾಗದಲ್ಲಿ ನಾವು ಪ್ರವಾಸೋದ್ಯಮ ನೀತಿ ರೂಪಿಸಿ ಬಂಡವಾಳ ಹೂಡಿಕೆದಾರರನ್ನು ಆಕರ್ಷಣೆ ಮಾಡಬೇಕಾದರೆ ಇಲ್ಲಿರುವ ಅಡಚಣೆ ಹೇಗೆ ಸರಿಪಡಿಸಬಹುದು. ಕಾನೂನು ಚೌಕಟ್ಟಿನಲ್ಲಿ ನಿವಾರಣೆ ಮಾಡಿ ನೂತನ ನೀತಿ ತರಬೇಕು ಎಂದು ಹೇಳಿದೆ” ಎಂದರು.
“ಬಹಳಷ್ಟು ಮಂದಿ ವಿದೇಶದಲ್ಲಿ ಇರುವವರು, ಮುಂಬೈ, ಬೆಂಗಳೂರಿನಲ್ಲಿ ನೆಲೆಸಿರುವ ಉದ್ಯಮಿಗಳು ತಮ್ಮ ಸ್ವಂತ ಊರಲ್ಲಿ ಏನಾದರೂ ಮಾಡಬೇಕು ಎನ್ನುವ ಆಸಕ್ತಿ ಹೊಂದಿದ್ದಾರೆ. ಅವರುಗಳು ಸರ್ಕಾರದಿಂದ ಅನುಕೂಲ ಮಾಡಿಕೊಟ್ಟರೆ ಬಂಡವಾಳ ಹೂಡುವುದಾಗಿ ತಿಳಿಸಿದ್ದಾರೆ. ಈ ಕಾರಣಕ್ಕೆ ನಾನು ವಿಧಾನಸಭೆ ಸೇರಿದಂತೆ ಹಲವಾರು ಕಡೆ ಇದರ ಬಗ್ಗೆ ಮಾತನಾಡಿದ್ದೇನೆ” ಎಂದರು.
“ಇಲ್ಲಿ ಖಾಸಗಿಯವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ. ಸರ್ಕಾರ ಒಂದಷ್ಟು ಮೂಲಸೌಕರ್ಯಗಳನ್ನು ಒದಗಿಸಿಕೊಡುತ್ತದೆ. ಜೊತೆಗೆ ಅನುಕೂಲತೆ, ಅನಾನುಕೂಲತೆ, ಸಮಸ್ಯೆಗಳನ್ನ ಚರ್ಚೆ ನಡೆಸಬೇಕಿದೆ. ಈ ಭಾಗದ ಎಲ್ಲಾ ಶಾಸಕರ ಬಳಿ ಈ ಬಗ್ಗೆ ಮಾತನಾಡಿದ್ದೇನೆ. ಎಲ್ಲರೂ ಬಹಳ ಆಸಕ್ತಿ ತೋರಿದ್ದಾರೆ” ಎಂದರು.
“ಈ ಬಗ್ಗೆ ಬೆಂಗಳೂರಿನಲ್ಲಿ ಜನಪ್ರತಿನಿಧಿಗಳ ಜೊತೆ ಚರ್ಚೆ ಮಾಡಿದಾಗ ಮಂಗಳೂರಿನಲ್ಲೇ ಈ ವಿಚಾರವಾಗಿ ಚರ್ಚೆ ಮಾಡೋಣ ಎಂದು ಹೇಳಿದರು. ಜತೆಗೂಡುವುದು ಆರಂಭ, ಜತೆಗೂಡಿ ಚರ್ಚೆಸುವುಗು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು ಎಂದು ನಾನು ನಂಬಿದ್ದೇನೆ. ಹೀಗಾಗಿ ಇಂದು ನಿಮ್ಮ ಜೊತೆ ಚರ್ಚೆ ಮಾಡಲು ಬಂದಿದ್ದೇನೆ. ನಮ್ಮ ಈ ಪ್ರಯತ್ನಕ್ಕೆ ನಾವು ಕೈಜೊಡಿಸುತ್ತೇವೆ ಎಂದು ಪಕ್ಷಾತೀತವಾಗಿ ಜನಪ್ರತಿನಿಧಿಗಳು ಮುಂದಾಗಿದ್ದಾರೆ. ಈ ಭಾಗದ ಅಭಿವೃದ್ಧಿ ಮಾಡಲು ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಿ, ಈ ಭಾಗದಲ್ಲಿ ಉದ್ಯೋಗ ಸೃಷ್ಟಿಸಿ ಎಲ್ಲರೂ ಬೆಳೆಯುವಂತಾಗಲಿ ಎಂಬುದು ಎಲ್ಲರ ಇಚ್ಛಾಶಕ್ತಿಯಾಗಿದೆ. ಇಲ್ಲಿ ರಾಜಕೀಯ ಮುಖ್ಯವಲ್ಲ. ನಮಗೆ ಸಿಕ್ಕ ಅವಕಾಶದಲ್ಲಿ ನಾವು ಏನು ಮಾಡುತ್ತೇವೆ ಅದು ಶಾಶ್ವತವಾಗಿ ಉಳಿಯಲಿದೆ” ಎಂದರು.
“ನಾನು ಸಹಕಾರಿ ಸಚಿವನಾಗಿದ್ದಾಗ, ಈ ಎರಡು ಜಿಲ್ಲೆಗಳ ಬ್ಯಾಂಕುಗಳು ಸಾಲ ವಸೂಲಾತಿಯಲ್ಲಿ 90% ಯಶಸ್ವಿಯಾಗುತ್ತಿದ್ದನ್ನು ನೋಡಿದ್ದೇನೆ. ಇಂತಹ ಶಿಸ್ತುಬದ್ಧ ಜನರ ಜ್ಞಾನ ಸಂಪತ್ತು ಸರಿಯಾಗಿ ಬಳಸಿಕೊಳ್ಳಲು ಈ ಸಭೆ ಕರೆದಿದ್ದೇನೆ. ”
“ಈ ಭಾಗಕ್ಕೆ ಮತ್ತೆ ಮರುಜೀವ ನೀಡಲು ಈ ಪ್ರತ್ಯೇಕ ಪ್ರವಾಸೋದ್ಯಮ ನೀತಿ ಅಗತ್ಯವಿದೆ. ಈ ಭಾಗ ರಾತ್ರಿ 7ರ ನಂತರ ಸ್ತಬ್ಧವಾಗುತ್ತದೆ ಎಂದು ನಾನು ಈ ಹಿಂದೆ ಹೇಳಿದ್ದೇನೆ. ಕೆಲವರು ಸ್ವಾಗತಿಸಿದರು, ಕೆಲವರು ಟೀಕಿಸಿದರು. ನನ್ನ ಮಾತನ್ನು ಸುಳ್ಳು ಮಾಡುವ ಛಲ ಬರಲಿ ಎಂದು ನಾನು ಟೀಕೆ ಮಾಡಿದ್ದೆ. ಇಂದು ನಾನು ಎಲ್ಲಾ ಉದ್ಯಮದವರನ್ನು ಈ ಸಮಾವೇಶಕ್ಕೆ ಆಹ್ವಾನಿಸಿದ್ದೇನೆ. ನಿಮ್ಮ ಅಭಿಪ್ರಾಯ ಸ್ವೀಕರಿಸಲು ನಾವು ಬದ್ಧವಾಗಿದ್ದೇವೆ. ನೀವು ಮುಕ್ತವಾಗಿ ನಿಮ್ಮ ಸಲಹೆಗಳನ್ನು ನೀಡಿ, ನಿಮ್ಮ ಸಲಹೆ ಅಭಿಪ್ರಾಯಗಳನ್ನು ಒಟ್ಟು ಸೇರಿಸಿ ಹಣಕಾಸು ಸ್ಥಿತಿಗೆ ಅನುಗುಣವಾಗಿ ನಾವು, ಸಿಎಂ, ಪ್ರವಾಸೋದ್ಯಮ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಚರ್ಚೆ ಮಾಡಿ ಸಚಿವ ಸಂಪುಟದ ಮುಂದೆ ಪ್ರಸ್ತಾಪ ಮಾಡುತ್ತೇವೆ” ಎಂದರು.
ಮಾಹಿತಿ: ಶಂಶೀರ್ ಬುಡೋಳಿ



