ತುಮಕೂರು : ತುಮಕೂರಿನ ಸುಪ್ರಸಿದ್ಧ ಸಿದ್ಧಗಂಗಾ ಮಠಕ್ಕೆ ಇಂದು ಬೆಳ್ಳಂಬೆಳಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭೇಟಿ ನೀಡಿ, ನಡೆದಾಡುವ ದೇವರು ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ ಅವರು, ಬಳಿಕ ಮಠದ ಅಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್ ಹಾಗೂ ಎಸ್.ಪಿ ಅಶೋಕ್ ಕೆ.ವಿ ಸಚಿವರಿಗೆ ಸಾಥ್ ನೀಡಿದರು. ಶ್ರೀಗಳೊಂದಿಗೆ ಮಾತುಕತೆ ನಡೆಸುವ ವೇಳೆ ಸಚಿವರು ತಮ್ಮ ಶೈಕ್ಷಣಿಕ ಸೇವೆಯ ಬಗ್ಗೆ ಪ್ರಸ್ತಾಪಿಸಿದ ಅವರು, ಮೈಸೂರಿನ ಪ್ರವೇಶ ದ್ವಾರದಲ್ಲಿ ‘ಕ್ವೆಸ್ಟ್ ಅಕಾಡೆಮಿ’ ಹೆಸರಿನ ಇಂಗ್ಲಿಷ್ ಮೀಡಿಯಂ ಶಾಲೆಯನ್ನು ಸುಮಾರು 40 ರಿಂದ 50 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವುದಾಗಿ ತಿಳಿಸಿದರು.
ಮೈಸೂರಿನಲ್ಲಿ ಇಂಗ್ಲಿಷ್ ಮಿಡಿಯಂ ಸ್ಕೂಲ್ ಮಾಡಿದ್ದೀರಾ? ಎಂದು ಪ್ರಶ್ನಿಸಿದ ಸಿದ್ದಲಿಂಗ ಸ್ವಾಮೀಜಿ. ಇದಕ್ಕೆ ಪ್ರತಿಕ್ರಿಯಿಸಿ, ಕಳೆದ ವರ್ಷವೇ ಮಾಡಿದ್ವಿ. ಮೈಸೂರಿಗೆ ಹೋಗುವ ಎಂಟ್ರೆಸ್ ನಲ್ಲಿ ಕ್ವೆಸ್ಟ್ ಅಕಾಡಿಮೆ ಅಂತ ಮಾಡಿದ್ದೇವಿ. 40-50 ಕೋಟಿ ಖರ್ಚು ಮಾಡಿ ಕಟ್ಟಿದ್ದೀವಿ. ನಮ್ದು ಸ್ವಲ್ಪ ಕಾನ್ವೆಂಟ್ ಎಜ್ಯೂಕೇಷನ್ ಇರಲಿಲ್ಲ. ನಮ್ಮವೆಲ್ಲಾ ಹಳ್ಳಿ ಶಾಲೆಗಳು. ಅಲ್ಲಿ ಒಂದೇರಡು ಎಕರೆ ಜಾಗ ಇತ್ತು ನಮ್ಮದು. ಅಂತವುಗಳಿಗೆ ಎರಡು ಎಕರೆ ಸಾಲಲ್ಲ, 10-20 ಎಕರೆ ಇರ್ಬೇಕು. ಮೊದಲಿಗೆ ಹೋಟೆಲ್ ಮ್ಯಾನೇಜ್ಮೆಂಟ್ ಮಾಡೋಣ ಅನ್ಕೊಂಡೆ, ಮೈಸೂರಿನಲ್ಲಿ ನಡೆಯುತ್ತೊ ಇಲ್ವೋ ಅಂತ ಶಾಲೆ ಮಾಡಿದೆವು ಎಂದು ಸಚಿವರು ಶ್ರೀಗಳ ಮುಂದೆ ಹಂಚಿಕೊಂಡರು.
ಇನ್ನೂ ಮಠದ ಭೇಟಿಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಪರಮೇಶ್ವರ್, ‘ನಮ್ಮ ಕುಟುಂಬ ತಂದೆಯ ಕಾಲದಿಂದಲೂ ಶ್ರೀಮಠಕ್ಕೆ ನಡೆದುಕೊಳ್ಳುತ್ತಿದೆ. ಮಠ ನಮಗೆ ಮನಶಾಂತಿ ಮತ್ತು ಸ್ಪೂರ್ತಿಯ ಸೆಲೆ. ಶ್ರೀಗಳು ಎಂದಿಗೂ ರಾಜಕೀಯ ಮಾರ್ಗದರ್ಶನ ನೀಡುವುದಿಲ್ಲ, ನಾವು ರಾಜಕೀಯ ಪ್ರಸ್ತಾಪ ಮಾಡಿದರೂ ಅವರು ಮೌನವಾಗಿ ನಕ್ಕುಬಿಡುತ್ತಾರೆ. ಇಂದು ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿರುವ ಮಠದ 1200 ವಿದ್ಯಾರ್ಥಿಗಳಿಗೆ ಶುಭ ಕೋರಿದ್ದೇನೆ ಎಂದರು.
ರಾಜ್ಯದ ನಿರುದ್ಯೋಗಿಗಳಿಗೆ ಸಚಿವರು ದೊಡ್ಡ ಭರವಸೆ ನೀಡಿ, ‘ಒಳಮೀಸಲಾತಿ ವಿಚಾರವಾಗಿ ಮಾ.28ರಂದು ಮುಖ್ಯಮಂತ್ರಿಗಳು ವಿಶೇಷ ಸಭೆ ಕರೆದಿದ್ದಾರೆ. ಅಂದು ಈ ಸಮಸ್ಯೆ ಬಗೆಹರಿಯುವ ವಿಶ್ವಾಸವಿದ್ದು, ಸರ್ಕಾರದ ಆದೇಶ ಹೊರಬಿದ್ದ ತಕ್ಷಣ 50 ಸಾವಿರ ಹುದ್ದೆಗಳ ಆಯ್ಕೆ ಪ್ರಕ್ರಿಯೆ ಆರಂಭವಾಗಲಿದೆ. ಇದರಲ್ಲಿ ಪೊಲೀಸ್ ಇಲಾಖೆಯ 8 ಸಾವಿರ ಹುದ್ದೆಗಳೂ ಸೇರಿವೆ ಎಂದು ಸ್ಪಷ್ಟಪಡಿಸಿದರು.
ನಂತರ ಎತ್ತಿನಹೊಳೆ ಯೋಜನೆಯ ಬಗ್ಗೆ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರ ಪ್ಲಾನ್ ಬದಲಿಸಿತ್ತು, ಆದರೆ ನಮ್ಮ ಸರ್ಕಾರ ಮೂಲ ಯೋಜನೆಯಂತೆ ವಡೇರಹಳ್ಳಿಯಲ್ಲೇ ಬಫರ್ ಡ್ಯಾಂ ನಿರ್ಮಿಸಲಿದೆ. ತುಮಕೂರು ಮತ್ತು ಚಿಕ್ಕಬಳ್ಳಾಪುರ ಗಡಿ ಭಾಗದ ಸುಮಾರು 5 ಸಾವಿರ ಎಕರೆಯಲ್ಲಿ ಈ ಡ್ಯಾಂ ನಿರ್ಮಾಣವಾಗಲಿದ್ದು, 1.5 ಟಿಎಂಸಿ ನೀರು ಸಂಗ್ರಹಿಸಲಾಗುವುದು. ಸ್ಥಳೀಯ ರೈತರ ವಿರೋಧವಿದ್ದರೆ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪರ್ಯಾಯ ವ್ಯವಸ್ಥೆ ಕಲ್ಪಿಸುತ್ತೇವೆ ಎಂದರು.
ಸಿಲಿಂಡರ್ ಕೊರತೆ ಇಲ್ಲ, ಕಾಳಸಂತೆಕೋರರಿಗೆ ಎಚ್ಚರಿಕೆ : ಅಂತರಾಷ್ಟ್ರೀಯ ಬಿಕ್ಕಟ್ಟಿನ ನಡುವೆಯೂ ಗ್ಯಾಸ್ ಪೂರೈಕೆಯಲ್ಲಿ ತೊಂದರೆಯಿಲ್ಲ ಎಂದು ಭರವಸೆ ನೀಡಿದ ಅವರು, ಹಾರ್ಮೋಸ್ ಸ್ಟ್ರೀಟ್ನಿಂದ ಭಾರತದ ಹಡಗುಗಳಿಗೆ ಮುಕ್ತ ಅವಕಾಶವಿರುವುದರಿಂದ ಪೆಟ್ರೋಲ್ ಮತ್ತು ಗ್ಯಾಸ್ ಪೂರೈಕೆ ಸುಗಮವಾಗಿದ್ದು, ತುಮಕೂರಿನಲ್ಲಿ ಗೃಹ ಬಳಕೆಯ ಸಿಲಿಂಡರ್ ಕೊರತೆ ಇಲ್ಲ. ಒಂದು ವೇಳೆ ಯಾರಾದರೂ ಸಿಲಿಂಡರ್ ದಾಸ್ತಾನು ಮಾಡಿ ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕುಡಿಯುವ ನೀರಿನ ಸಮಸ್ಯೆ, ಹೇಮಾವತಿ ನೀರು : ಜಿಲ್ಲೆಯಲ್ಲಿ ಸದ್ಯಕ್ಕೆ ಟ್ಯಾಂಕರ್ ಮೂಲಕ ನೀರು ಕೊಡುವ ಪರಿಸ್ಥಿತಿ ಬಂದಿಲ್ಲ. ಆದರೆ ಬುಗುಡನಹಳ್ಳಿ ಕೆರೆ ಡೆಡ್ ಸ್ಟೋರೇಜ್ ತಲುಪಿರುವುದರಿಂದ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಈ ಬಗ್ಗೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರ ಬಳಿ 1.5 ಟಿಎಂಸಿ ಹೇಮಾವತಿ ನೀರು ಬಿಡುವಂತೆ ಮನವಿ ಮಾಡಿದ್ದೇವೆ. ಆ ನೀರು ಬಂದರೆ ಮೇ ತಿಂಗಳವರೆಗೆ ಜಿಲ್ಲೆಗೆ ನೀರಿನ ತೊಂದರೆ ಇರುವುದಿಲ್ಲ ಎಂದು ಮಾಹಿತಿ ನೀಡಿದರು.



