ತುಮಕೂರು: ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಒಟ್ಟು 32 ನವಿಲುಗಳ ಸಾವನ್ನಪ್ಪಿದ್ದು, ಹೀಟ್‌ಸ್ಟ್ರೋಕ್‌ನಿಂದ ಮೃತಪಟ್ಟಿರುವ ಅನುಮಾನ ವ್ಯಕ್ತವಾಗಿದೆ.
ತುಮಕೂರು ತಾಲೂಕಿನ ಬೊಮ್ಮನಹಳ್ಳಿ, ಕೋಳಿಹಳ್ಳಿ, ಭೈರಸಂದ್ರ, ಹುಲ್ಲೆನಹಳ್ಳಿ ಸೇರಿದಂತೆ ಇತರೆ ಗ್ರಾಮಗಳಲ್ಲಿ ಏ.16ರಿದು ಒಂದೇ ದಿನ 11 ನವಿಲುಗಳು ಸಾವನ್ನಪ್ಪಿದ್ದು, ಏ 21ರಂದು 10 ನವಿಲುಗಳು ಸಾವನ್ನಪ್ಪಿದೆ. ಜಿಲ್ಲೆಯಾದ್ಯಂತ ಒಟ್ಟು 32 ನವಿಲುಗಳ ಮೃತಪಟ್ಟಿದ್ದು, ಅರಣ್ಯ ಇಲಾಖೆ ಹಾಗೂ ಪ್ರಾಣಿ ಪ್ರೇಮಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ.
ನವಿಲುಗಳ ಈ ಧಾರುಣ ಸಾವು ಅರಣ್ಯ ಇಲಾಖೆಯನ್ನು ಕಂಗಾಲು ಮಾಡಿದೆ. ಪ್ರಾಥಮಿಕ ತಪಾಸಣೆಯಲ್ಲಿ ಯಾವುದೇ ವಿಷಪ್ರಾಶನದ ಕುರುಹುಗಳು ಕಂಡುಬಂದಿಲ್ಲ. ಹೀಗಾಗಿ, ಅತಿಯಾದ ಬಿಸಿಲಿನ ತಾಪದಿಂದ ಉಂಟಾದ ‘ಹೀಟ್ ಸ್ಟೋಕ್ ಅಥವಾ ನಿರ್ಜಲೀಕರಣದಿಂದಲೇ ಈ ಪಕ್ಷಿಗಳು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.
ನವಿಲುಗಳ ಸಾವಿನ ಅಸಲಿ ಕಾರಣ ಪತ್ತೆಹಚ್ಚಲು ಡಿಸಿಎಫ್ (DCF) ಶಶಿಧರ್ ಅವರು ಈಗಾಗಲೇ ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ. ಸಾವನ್ನಪ್ಪಿದ ನವಿಲುಗಳ ಅಂಗಾಂಗಗಳ ಮಾದರಿಯನ್ನು ಸಂಗ್ರಹಿಸಲಾಗಿದ್ದು, ಅವುಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ವರದಿ ಬಂದ ನಂತರವೇ ಇದು ಕಾಯಿಲೆಯೋ ಅಥವಾ ಬಿಸಿಲಿನ ತಾಪವೋ ಎಂಬುದು ಸ್ಪಷ್ಟವಾಗಲಿದೆ.



