ಬೆಂಗಳೂರು: ನಿವೃತ್ತಿ ಬಳಿಕ ಪಿಂಚಣಿ ಹಾಗೂ ಇತರ ನಿವೃತ್ತಿ ಭತ್ಯೆಗಳನ್ನು ನಿರಾಕರಿಸಿದ್ದ ಕ್ರಮ ಪ್ರಶ್ನಿಸಿ ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯದ ಕೆಲ ನಿವೃತ್ತ ನೌಕರರು ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಹಾಗೂ ಸಂಸ್ಕೃತ ವಿಶ್ವ ವಿದ್ಯಾಲಯಕ್ಕೆ ಕರ್ನಾಟಕ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಆ ಮೂಲಕ ನಿವೃತ್ತ ನೌಕರರ ಬೆನ್ನಿಗೆ ನಿಂತಿದೆ.
20 ವರ್ಷಕ್ಕೂ ಕಾಲ ಸೇವೆ: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಬರೋಬ್ಬರಿ 20 ವರ್ಷಕ್ಕೂ ಕಾಲ ಸೇವೆ ಸಲ್ಲಿಸಿರುವ ಎಸ್ ನಾರಾಯಣ ಸೇರಿ ಐವರು ನಿವೃತ್ತ ನೌಕರರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಚ್ ಟಿ ನರೇಂದ್ರ ಪ್ರಸಾದ್ ಇದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಕೆಲಕಾಲ ನಾರಾಯಣ ಸೇರಿ ಐವರು ನಿವೃತ್ತ ನೌಕರರು ಸಲ್ಲಿಸಿರುವ ಅರ್ಜಿ ವಿಚಾರಣೆ ಆಲಿಸಿದ ಪೀಠವು, ಪ್ರತಿವಾದಿಗಳಾದ ರಾಜ್ಯ ಉನ್ನತ ಶಿಕ್ಷಣ ಇಲಾಖೆ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಹಾಗೂ ರಾಜ್ಯ ಆರ್ಥಿಕ ಇಲಾಖೆಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಮುಂದೂಡಿತು.
ಸಂಸ್ಕೃತ ವಿವಿ ನಿರಾಕರಣೆ?: ಮೇಲುಕೋಟೆಯಲ್ಲಿ ಇರುವ ಸಂಸ್ಕೃತ ಸಂಶೋಧನಾ ಅಕಾಡೆಮಿಯಲ್ಲಿ 1979 ರಿಂದ 1992ರ ಅವಧಿಯಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಕೊಂಡಿದ್ದ ಅರ್ಜಿದಾರರೆಲ್ಲರೂ 2013ರಿಂದ 2017ರ ಅವಧಿಯಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ.
ಬರೋಬ್ಬರಿ ಎರಡು ದಶಕಗಳಿಗೂ ಅಧಿಕ ಅವಧಿಯವರೆಗೆ ಸೇವೆ ಸಲ್ಲಿಸಿದ್ದರೂ ಕೂಡ ಅರ್ಜಿದಾರರಿಗೆ ಪಿಂಚಣಿ ಇನ್ನಿತರ ನಿವೃತ್ತಿ ಭತ್ಯೆಗಳನ್ನು ಸಂಸ್ಕೃತ ವಿವಿ ನಿರಾಕರಿಸಿದೆಯಂತೆ. ಗುತ್ತಿಗೆ ಆಧಾರದಲ್ಲಿ ನೇಮಕೊಂಡಿದ್ದರೂ 2007ರ ಏಪ್ರಿಲ್ 1ರಿಂದ ಸರ್ಕಾರ ಸಾಮಾನ್ಯ ವೇತನ ಶ್ರೇಣಿಯನ್ನು ಅರ್ಜಿದಾರರಿಗೂ ವಿಸ್ತರಿಸಿದೆ ಎಂದು ಅರ್ಜಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಅರ್ಜಿದಾರರಿಗೆ ಅವರ ಸೇವಾ ಅಧಿಯಲ್ಲಿ ವೇತನವನ್ನಷ್ಟೇ ಪಾವತಿ ಮಾಡಲಾಗಿದೆ. ಅರ್ಜಿದಾರರು 2006ರ ಏಪ್ರಿಲ್ 1ಕ್ಕೂ ಮೊದಲೇ ನೇಮಕಗೊಂಡಿದ್ದು, ಈ ದಿನಾಂಕಕ್ಕೂ ಮುನ್ನ ಸರ್ಕಾರಿ ಅನುದಾನಿತ ಸಂಸ್ಥೆಗಳಿಗೆ ನೇಮಕಗೊಳ್ಳುವ ನೌಕರರು ಹಳೇ ಪಿಂಚಣಿ ಯೋಜನೆ (ಒಪಿಎಸ್) ಅಡಿಯಲ್ಲಿ ಪಿಂಚಣಿ ಹಾಗೂ ನಿವೃತ್ತಿ ಭತ್ಯೆಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.
ಮೇಲುಕೋಟೆ ಸಂಸ್ಕೃತ ಅಕಾಡೆಮಿಯಲ್ಲಿ ಸೇವೆ ಸಲ್ಲಿಸಿದವರಿಗೆ ನಿವೃತ್ತಿ ಭತ್ಯೆ ಪಾವತಿ ಬಗ್ಗೆ ಸಂಸ್ಕೃತ ವಿಶ್ವವಿದ್ಯಾಲಯ ಸಹ ಶಿಫಾರಸ್ಸು ಮಾಡಿದೆ. ಆದರೂ, ಅರ್ಜಿದಾರರಿಗೆ ಸೌಲಭ್ಯ ನಿರಾಕರಿಸಲಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದೆ.
ಮೇಲುಕೋಟೆಯ ಸಂಸ್ಕೃತ ಸಂಶೋಧನಾ ಅಕಾಡೆಮಿಗೆ 2015ರ ಮಾರ್ಚ್ 25ರಿಂದ 6ನೇ ವೇತನ ಆಯೋಗದ ಲಾಭಗಳನ್ನು ನೀಡಲಾಗಿದೆ. ಆದರೆ, ಅರ್ಜಿದಾರರಿಗೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಸಂಬಂಧ ಅರ್ಜಿದಾರರ ಮನವಿ ಪರಿಗಣಿಸಿ, ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಮಾನವ ಹಕ್ಕುಗಳ ಆಯೋಗ ಹಾಗೂ ಹೈಕೋರ್ಟ್ ಸಹ ಆದೇಶ ನೀಡಿವೆಯಾದರೂ, ಅರ್ಜಿದಾರರ ಮನವಿಗಳನ್ನು ಸರ್ಕಾರ ತಿರಸ್ಕರಿಸಿದೆ.
ಇದೇ ಕಾರಣಕ್ಕೆ, ಅರ್ಜಿದಾರರು ನಿವೃತ್ತಿ ಹೊಂದಿದ ದಿನಾಂಕದಿಂದ ಅನ್ವಯವಾಗುವಂತೆ ಪಿಂಚಣಿ ಹಾಗೂ ಇತರ ನಿವೃತ್ತಿ ಭತ್ಯೆಗಳನ್ನು ಪಾವತಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಅರ್ಜಿದಾರರ ವಾದ ಆಲಿಸಿದ ಹೈಕೋರ್ಟ್, ರಾಜ್ಯ ಸರ್ಕಾರ, ಸಂಸ್ಕೃತ ವಿಶ್ವ ವಿದ್ಯಾಲಯಕ್ಕೆ ನೋಟಿಸ್ ಜಾರಿ ಮಾಡಿದೆ.