Tuesday, April 7, 2026
Google search engine

Homeರಾಜಕೀಯಜನ ತಿರಸ್ಕರಿಸಿದರೂ ಪಾಠ ಕಲಿತಿಲ್ಲ :ಸಚಿವ ಕುಮಾರಸ್ವಾಮಿಗೆ ಸಿಎಂ ತಿರುಗೇಟು

ಜನ ತಿರಸ್ಕರಿಸಿದರೂ ಪಾಠ ಕಲಿತಿಲ್ಲ :ಸಚಿವ ಕುಮಾರಸ್ವಾಮಿಗೆ ಸಿಎಂ ತಿರುಗೇಟು

ದಾವಣಗೆರೆ : ಪ್ರಜಾಪ್ರಭುತ್ವದಲ್ಲಿ ಜನರ ಆಶಯವೇ ಮುಖ್ಯವಾಗಿದ್ದು, ಜನ ಬಯಸಿದರೆ ರಾಜಕಾರಣಕ್ಕೆ ಬರುವುದು ತಪ್ಪಲ್ಲ. ಆದರೆ ಜನ ತಿರಸ್ಕರಿಸಿದ ನಂತರವೂ ಕುಟುಂಬ ರಾಜಕಾರಣವನ್ನು ಸಮರ್ಥಿಸಿಕೊಳ್ಳುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್.ಡಿ.ಕುಮಾರಸ್ವಾಮಿ ವಿರುದ್ಧ ತಿರುಗೇಟು ನೀಡಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್.ಡಿ.ದೇವೇಗೌಡ ಅವರ ಕುಟುಂಬದ ಹಲವರು ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ ಎಂದು ಹೇಳಿ, ಜೆಡಿಎಸ್ ಪಕ್ಷದಲ್ಲಿ ಕುಟುಂಬ ರಾಜಕಾರಣವೇ ಹೆಚ್ಚಾಗಿದೆ ಎಂದು ಆರೋಪಿಸಿದರು.

ಚನ್ನಪಟ್ಟಣ ಉಪಚುನಾವಣೆಯಲ್ಲಿ ಕುಮಾರಸ್ವಾಮಿ ಅವರ ಪುತ್ರನ ಸ್ಪರ್ಧೆಯನ್ನು ಜನರು ಬಯಸಲಿಲ್ಲ, ಮತದಾರರು ತಿರಸ್ಕರಿಸಿದರೂ ಪಾಠ ಕಲಿತಿಲ್ಲ ಎಂದು ಅವರು ಲೇವಡಿ ಮಾಡಿದರು.

2004ರಲ್ಲಿ ತಾವು ಜೆಡಿಎಸ್ ಅಧ್ಯಕ್ಷರಾಗಿದ್ದಾಗ ಪಕ್ಷ 59 ಸ್ಥಾನಗಳನ್ನು ಗೆದ್ದಿತ್ತು. ಆದರೆ ನಂತರ ಜೆಡಿಎಸ್ ಶಕ್ತಿ ಕುಸಿದು 2023ರಲ್ಲಿ 19 ಸ್ಥಾನಗಳಿಗೆ ಇಳಿದಿದೆ ಎಂದು ಸಿದ್ದರಾಮಯ್ಯ ಹೇಳಿದರು. ಅಸ್ತಿತ್ವ ಉಳಿಸಿಕೊಳ್ಳಲು ಜೆಡಿಎಸ್ ಮತ್ತು ಬಿಜೆಪಿ ಕೈಜೋಡಿಸಿರುವುದನ್ನೂ ಟೀಕಿಸಿದರು.

ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರ ಆಹ್ವಾನಕ್ಕೆ ಪ್ರತಿಕ್ರಿಯಿಸಿದ ಸಿಎಂ, “ಅವರಿಗೆ ಸ್ವತಂತ್ರ ಅಧಿಕಾರವೇ ಇಲ್ಲ, ಅವರ ಬಳಿಗೆ ಫೈಲ್‌ಗಳು ಬರುವುದಿಲ್ಲ. ಹೀಗಿರುವಾಗ ಅವರ ಕಚೇರಿಗೆ ಹೋಗಿ ಏನು ಮಾಡುವುದು?” ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ನಿಂದ ಬಿಜೆಪಿ ಸೇರಿ ಈಗ ಕಾಂಗ್ರೆಸ್ ವಿರುದ್ಧ ಮಾತನಾಡುತ್ತಿರುವ ಛಲವಾದಿ ನಾರಾಯಣಸ್ವಾಮಿ ವಿರುದ್ಧವೂ ಸಿಎಂ ಗುಡುಗಿದರು. ಬಿಜೆಪಿ 9 ವರ್ಷ ಆಡಳಿತ ನಡೆಸಿದರೂ ಅಭಿವೃದ್ಧಿ ಮಾಡಿಲ್ಲ ಎಂದು ಟೀಕಿಸಿದರು. ರಾಜ್ಯದ ಪಂಚ ಗ್ಯಾರಂಟಿ ಯೋಜನೆಗಳಿಗೆ ಜನ ಬೆಂಬಲವಿದ್ದು, ಉಪಚುನಾವಣೆಯಲ್ಲಿ ಅದನ್ನೇ ಆಧಾರ ಮಾಡಿಕೊಂಡು ಮತ ಕೇಳುತ್ತಿರುವುದಾಗಿ ಹೇಳಿದರು.

ರಾಜ್ಯದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಅಡ್ಡಿಯಾಗುತ್ತಿದೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ, “ಕೊಟ್ಟ ಕುದುರೆಯನ್ನು ಏರದವ ವೀರನೂ ಅಲ್ಲ, ಶೂರನೂ ಅಲ್ಲ” ಎಂದು ಚಾಟಿ ಬೀಸಿದರು.

RELATED ARTICLES
- Advertisment -
Google search engine

Most Popular