ಬೆಂಗಳೂರು : ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಜೆಡಿಎಸ್ ಪಕ್ಷ ಬಿಜೆಪಿಯ ಜೊತೆ ಶೀಘ್ರವೇ ವಿಲೀನಗೊಳ್ಳುವ ಸಾಧ್ಯತೆ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭವಿಷ್ಯ ನುಡಿದಿದ್ದಾರೆ.
ಜೆಡಿಎಸ್‌ನಿಂದ ವಲಸೆ ಬಂದ ಮುಖಂಡರನ್ನು ಕಾಂಗ್ರೆಸ್ ಗೆ ಸೇರ್ಪಡೆ ಮಾಡಿಕೊಂಡ ಬಳಿಕ ಮಾತನಾಡಿದ ಅವರು, ಕುಮಾರಸ್ವಾಮಿಯವರ ಧೋರಣೆ ನೋಡಿದರೆ ಶೀಘ್ರದಲ್ಲೇ ಬಿಜೆಪಿ ಜೊತೆ ವಿಲೀನಗೊಳ್ಳುವ ಲಕ್ಷಣಗಳು ಕಂಡು ಬರುತ್ತಿವೆ. ಒಂದು ವೇಳೆ ವಿಲೀನವಾದರೆ ನಮಗೆ ಅನುಕೂಲ ನೇರವಾಗಿ ಎರಡು ಪಕ್ಷಗಳ ಜೊತೆ ಹೋರಾಟ ಮಾಡಬಹುದು ಎಂದರು.
ಆಟಕ್ಕೆ ಮೂರು ಪಕ್ಷ, ಲೆಕ್ಕಕ್ಕೆ ಎರಡು ಪಕ್ಷ ಎಂಬ ರೀತಿ ಇರದೆ, ಬೇಗ ಬಿಜೆಪಿಯೊಂದಿಗೆ ಜೆಡಿಎಸ್ ವಿಲೀನಗೊಳ್ಳಲಿ. ಜೆಡಿಎಸ್-ಬಿಜೆಪಿ ಎರಡು ಪಕ್ಷಗಳಲ್ಲಿರುವ ಮುಖಂಡರಲ್ಲಿ ಗೊಂದಲ ಇದೆ. ಇಂತಹ ತೀರ್ಮಾನವನ್ನು ಬೇಗ ಕೈಗೊಂಡರೆ ನಾವು ರಾಜಕೀಯವಾಗಿ ಏನಾದರೊಂದು ನಿರ್ಧಾರ ತೆಗೆದುಕೊಳ್ಳಬಹುದು. ಪ್ರಮುಖ ನಾಯಕರು ಅಡ್ಡಗೋಡೆಯ ಮೇಲೆ ದೀಪವಿಡುತ್ತಿದ್ದಾರೆ. ಇದರಿಂದ ನಮಗೂ ಮುಂದಿನ ಭವಿಷ್ಯ ಏನು ಎಂದು ತಿಳಿಯುತ್ತಿಲ್ಲ ಎಂಬ ಗೊಂದಲದಲ್ಲಿದ್ದಾರೆ. ವಿಲೀನವಾಗಲಿದೆ ಎಂದು ಖಚಿತವಾದರೆ ನಾವು ನಮ್ಮ ದಾರಿ ನೋಡಿಕೊಳ್ಳುತ್ತೇವೆ ಎಂದು ಬಹಳಷ್ಟು ನಾಯಕರು ಹೇಳುತ್ತಿದ್ದಾರೆ ಎಂದರು.
ಗ್ರೇಟರ್ ಬೆಂಗಳೂರಿನ ಪಾಲಿಕೆಗಳಿಗೆ ಚುನಾವಣೆ ನಡೆಸಬೇಕಿದೆ. ಕಾಂಗ್ರೆಸ್ ಸ್ಪರ್ಧಾಕಾಂಕ್ಷಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪಶ್ಚಿಮ ಪಾಲಿಕೆಯಲ್ಲಿ ಸ್ಪರ್ಧಿಸಲು 247, ಉತ್ತರದಲ್ಲಿ 199, ದಕ್ಷಿಣದಲ್ಲಿ 129, ಕೇಂದ್ರದಲ್ಲಿ 106, ಪೂರ್ವದಲ್ಲಿ 78 ಸೇರಿ ಒಟ್ಟು 779 ಜನ ಅಭ್ಯರ್ಥಿಗಳು ಅರ್ಜಿಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಟಿಕೆಟ್ ಬಯಸಿ ಅರ್ಜಿ ಪಡೆದಿರುವವರು ಕೊನೆಯ ದಿನಾಂಕದವರೆಗೂ ಕಾಯ್ದು ಕುಳಿತುಕೊಳ್ಳದೆ ಒಂದೆರಡು ದಿನದಲ್ಲೇ ಪಕ್ಷದ ಕಚೇರಿಗೆ ಅರ್ಜಿ ಸಲ್ಲಿಸಿ ಎಂದು ಸಲಹೆ ನೀಡಿದರು.
ಅಭ್ಯರ್ಥಿಗಳ ಆಯ್ಕೆಗೆ ನಾವು ನಮ್ಮದೇ ಆದ ರೀತಿಯಲ್ಲಿ ಪರಿಶೀಲನೆ ನಡೆಸಬೇಕಿದೆ. ಅದಕ್ಕಾಗಿ ಜ.10ರೊಳಗೆ ಅರ್ಜಿ ಸಲ್ಲಿಕೆ ಮಾಡಿ. ಅರ್ಜಿ ಹಾಕಿರುವವರು ಯಾರು ? ಏನು ಕೆಲಸ ಮಾಡಿದ್ದಾರೆ ? ಅವರ ಶಕ್ತಿ ಏನು ? ನೆಪ ಮಾತ್ರಕ್ಕೆ ಅರ್ಜಿ ಹಾಕಿದ್ದಾರೆಯೇ ? ಅವರಿಗೆ ಹಿಂಬಾಲಕರಿದ್ದಾರೆಯೇ ? ನಾಯಕತ್ವ ಮತ್ತು ಸೇವೆ ಮಾಡುವ ಗುಣ ಇದೆಯೇ ? ಪಕ್ಷಕ್ಕೆ ನಿಷ್ಠರಾಗಿರುತ್ತಾರೆಯೇ ? ಎಂಬೆಲ್ಲ ಮಾಹಿತಿ ಬಗ್ಗೆ ತಳಮಟ್ಟದಿಂದ ಪ್ರತ್ಯೇಕವಾದ ವರದಿ ಪಡೆದುಕೊಳ್ಳಬೇಕಿದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಬೆಂಗಳೂರಿನಲ್ಲಿ ಕೈಗೊಂಡಿರುವ ಕಾರ್ಯಕ್ರಮಗಳಿಂದ ಜನ ನೆಮ್ಮದಿಯಿಂದಿದ್ದಾರೆ. ವಿರೋಧ ಪಕ್ಷ ಬಿಜೆಪಿಯವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಾಗಿದೆ. ಬಿ ಖಾತಾಗಳಿಗೆ ಎ ಖಾತೆ ನೀಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಬಡವರಿಗೆ ಸಹಾಯ ಮಾಡುತ್ತಿದೆ. ಕಾನೂನು ಬಾಹಿರವಾಗಿ ಬಡವರಿಗೆ ನೆರವು ನೀಡುತ್ತಿದೆ. ಇದನ್ನೆಲ್ಲ ನೋಡಿದರೆ ಬಿಜೆಪಿಗೆ ಭವಿಷ್ಯ ಇಲ್ಲ ಎನಿಸುತ್ತಿದೆ ಎಂದು ಆ ಪಕ್ಷದ ಮುಖಂಡರೇ ನನ್ನ ಬಳಿ ಹೇಳಿಕೊಳ್ಳುತ್ತಿದ್ದಾರೆ ಎಂದರು.
ಜೆಡಿಎಸ್ ನಾಯಕರು ತಮ ಪಕ್ಷವನ್ನು ಉಳಿಸಿಕೊಳ್ಳಲು ಬಿಜೆಪಿಯ ಜೊತೆ ಫ್ರೆಂಡ್ಲಿ ಫೈಟ್ ಮಾಡುವುದಾಗಿ ಹೇಳುತ್ತಿದ್ದಾರೆ. ಫ್ರೆಂಡ್ಲಿ ಫೈಟ್ ಏಕೆ ನೇರವಾಗಿ ಮೈತ್ರಿ ಮಾಡಿಕೊಂಡು ಹೋರಾಟ ಮಾಡಿ. ಫ್ರೆಂಡ್ಲಿ ಫೈಟ್‌ನಿಂದ ನಿಮ್ಮದೇ ಪಕ್ಷದ ಕಾರ್ಯಕರ್ತರಿಗೂ ಗೊಂದಲಗಳಾಗುತ್ತವೆ. ನಾವು ನೇರವಾಗಿ ಹೋರಾಟ ಮಾಡುತ್ತೇವೆ, ನೀವು ಹೋರಾಟ ಮಾಡಿ. ರಾಜ್ಯದಲ್ಲಿ
ಎರಡೇ ಪಕ್ಷಗಳು ಇರಬೇಕು ಇದರಿಂದ ರಾಜ್ಯಕ್ಕೂ ಒಳ್ಳೆಯದಾಗುತ್ತದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ 5 ಪಾಲಿಕೆಗಳನ್ನು ಮಾಡಿರುವ ನಿರ್ಧಾರ ಮಹತ್ವದ್ದಾಗಿದೆ. ಕಾಂಗ್ರೆಸ್ ಪಕ್ಷ ಎಲ್ಲಾ ವರ್ಗದ ಜನರನ್ನು ಸಮಾನತೆಯಿಂದ ನೋಡುತ್ತಿದೆ. ಅನೇಕ ಪಕ್ಷಗಳಿಂದ ಕಾಂಗ್ರೆಸ್ ನತ್ತ ಜನ ವಲಸೆ ಬರುತ್ತಿದ್ದಾರೆ. ಬರುವವರು ಬೇಗ ಬನ್ನಿ, ತಡವಾಗಿ ಬಂದರೆ ಬೇರೆ ತೀರ್ಮಾನ ತೆಗೆದುಕೊಳ್ಳಲು ನಮಗೆ ಕಷ್ಟವಾಗುತ್ತದೆ ಎಂದು ಹೇಳಿದರು.
ಪಾಲಿಕೆಗಳಿಗೆ ಶೀಘ್ರವೇ ಚುನಾವಣೆ ನಡೆಸಲಾಗುವುದು. ಮೀಸಲಾತಿ, ಕ್ಷೇತ್ರ ಪುನರ್ ವಿಂಗಡನೆ ವಿಷಯಗಳ ಬಗ್ಗೆ ಈಗಾಗಲೇ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದೆ. ಚುನಾವಣೆ ನಡೆಸುವ ದಿನಾಂಕವನ್ನು ಈಗಾಗಲೇ ಪ್ರಮಾಣ ಪತ್ರದ ಮೂಲಕ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಚುನಾವಣೆಯನ್ನಂತೂ ನಡೆಸಲೇಬೇಕಿದೆ. ರಾಜಕಾರಣದಲ್ಲಿ ಸೋಲು-ಗೆಲುವು ಬೇರೆಯ ವಿಚಾರ. ನಾವು ಸೋಲುತ್ತೇವೆ ಎಂದು ಚುನಾವಣೆ ಮಾಡುತ್ತಿಲ್ಲ. ಇದು ಚುನಾವಣೆಯ ವರ್ಷ ಪಾಲಿಕೆಗಳು, ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು.
ಮತದಾರರ ಪಟ್ಟಿ ಪರಿಷ್ಕರಣೆ, ಸ್ಥಳೀಯ ಸಂಸ್ಥೆಗಳನ್ನು ಮೇಲ್ದರ್ಜಗೇರಿಸುವುದೂ ಸೇರಿದಂತೆ ಹಲವಾರು ತೀರ್ಮಾನಗಳನ್ನು ಕೈಗೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರ ಗಣತಿ ಕಾರ್ಯ ನಡೆಸುತ್ತಿದೆ. ಹೀಗಾಗಿ ಹೊಸದಾಗಿ ಮೇಲ್ದರ್ಜೆಗೇರಿಸಲು ಅವಕಾಶ ನೀಡುತ್ತಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದವರು ಮತ್ತೆ ವಾಪಸ್ ಹೋಗುವ ಕೆಲಸ ಮಾಡಬೇಡಿ. ಜೆಡಿಎಸ್ ಎಂಬುದು ಕುಟುಂಬದ ವೈಯಕ್ತಿಕ ಪಕ್ಷವಾಗಿದೆ. ನಮ್ಮ ಪಕ್ಷದಲ್ಲಿ ಹಳಬರು-ಹೊಸಬರು ಎಂಬ ತಾರತಮ್ಯ ಇಲ್ಲದೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಜೆಡಿಎಸ್ ಮುಖಂಡ ಗೋವಿಂದರಾಜು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಸಚಿವ ಜಮೀರ್ ಅಹಮದ್ ಖಾನ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.



