ನವದೆಹಲಿ: ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿ, ಕೊಡಗು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಆನೆ–ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಲ್ಪಿಸುವುದು ಹಾಗೂ ಮೈಸೂರಿನ ತಿಪ್ಪಯ್ಯನ ಕೆರೆಯಲ್ಲಿ ನಗರ ವನ ಯೋಜನೆ ಜಾರಿಗೊಳಿಸುವ ಕುರಿತು ಮಹತ್ವದ ಮನವಿ ಸಲ್ಲಿಸಿದರು.
ಸಭೆಯಲ್ಲಿ ಮಾತನಾಡಿದ ಯದುವೀರ್ ಒಡೆಯರ್, ಕೊಡಗು ಜಿಲ್ಲೆಯ ವಿವಿಧ ಭಾಗಗಳಲ್ಲಿ ಆನೆಗಳು ಕೃಷಿ ಭೂಮಿಗಳು ಮತ್ತು ಜನವಸತಿ ಪ್ರದೇಶಗಳಿಗೆ ನುಗ್ಗುವ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದು ಸ್ಥಳೀಯರ ಜೀವನಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಸಚಿವರ ಗಮನಕ್ಕೆ ತಂದರು. ಆನೆಗಳ ದಾಳಿಯಿಂದ ಮಾನವ ಜೀವಹಾನಿ, ಗಾಯಗಳು, ಬೆಳೆ ಹಾಗೂ ಆಸ್ತಿ ನಷ್ಟ ಉಂಟಾಗುತ್ತಿದ್ದು, ಗ್ರಾಮೀಣ ಪ್ರದೇಶದ ರೈತರು ಮತ್ತು ಕಾರ್ಮಿಕರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ ಎಂದು ವಿವರಿಸಿದರು.
ಈ ಸಮಸ್ಯೆಗೆ ದೀರ್ಘಕಾಲೀನ ಪರಿಹಾರ ಕಂಡುಕೊಳ್ಳಲು ಕೇಂದ್ರ ಸರ್ಕಾರದ ಸಹಕಾರ ಅಗತ್ಯವಿದೆ ಎಂದು ಅವರು ತಿಳಿಸಿದರು. ಆನೆ ತಡೆಗೋಡೆಗಳ ಬಲವರ್ಧನೆ, ಸೌರ ಬೇಲಿ ನಿರ್ಮಾಣ, ಆನೆಗಳ ಚಲನವಲನದ ವೈಜ್ಞಾನಿಕ ಮೇಲ್ವಿಚಾರಣೆ, ಮುನ್ನೆಚ್ಚರಿಕೆ ವ್ಯವಸ್ಥೆ, ಅರಣ್ಯ ವಾಸಸ್ಥಳಗಳ ಅಭಿವೃದ್ಧಿ ಹಾಗೂ ತ್ವರಿತ ಪ್ರತಿಕ್ರಿಯಾ ತಂಡಗಳ ರಚನೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದರು. ಜೊತೆಗೆ, ಆನೆ ದಾಳಿಯಿಂದ ನಷ್ಟ ಅನುಭವಿಸುವ ಕುಟುಂಬಗಳು ಮತ್ತು ರೈತರಿಗೆ ಸೂಕ್ತ ಪರಿಹಾರ ವ್ಯವಸ್ಥೆ ಬಲಪಡಿಸಬೇಕೆಂದೂ ಕೋರಿದರು.
ಇದೇ ವೇಳೆ ಮೈಸೂರಿನ ಹೊರವರ್ತುಲ ರಸ್ತೆಯ ಸಮೀಪದ ತಿಪ್ಪಯ್ಯನ ಕೆರೆಯನ್ನು ನಗರ ವನ ಯೋಜನೆಯಡಿ ಅಭಿವೃದ್ಧಿಪಡಿಸುವ ಪ್ರಸ್ತಾವವನ್ನೂ ಸಚಿವರಿಗೆ ಸಲ್ಲಿಸಿದರು. ತಿಪ್ಪಯ್ಯನ ಕೆರೆ ಈಗಾಗಲೇ ಪರಿಸರ ಮತ್ತು ಜೀವವೈವಿಧ್ಯದ ದೃಷ್ಟಿಯಿಂದ ಮಹತ್ವದ ತಾಣವಾಗಿದ್ದು, ಅನೇಕ ಪಕ್ಷಿಗಳು ಹಾಗೂ ಇತರ ಜೀವಿಗಳ ಆಶ್ರಯ ತಾಣವಾಗಿ ಬೆಳೆಯುತ್ತಿದೆ ಎಂದು ಅವರು ತಿಳಿಸಿದರು.
ನಗರ ವನ ಯೋಜನೆ ಜಾರಿಯಾದರೆ ಮೈಸೂರಿನಲ್ಲಿ ಹಸಿರು ವಲಯ ವಿಸ್ತರಣೆಯಾಗುವುದರ ಜೊತೆಗೆ ಪರಿಸರ ಸಂರಕ್ಷಣೆ, ಜೀವವೈವಿಧ್ಯ ವೃದ್ಧಿ, ವಿದ್ಯಾರ್ಥಿಗಳಿಗೆ ಪ್ರಕೃತಿ ಅಧ್ಯಯನ ಅವಕಾಶ ಮತ್ತು ಸಾರ್ವಜನಿಕರಿಗೆ ಆರೋಗ್ಯಕರ ಪರಿಸರ ಒದಗಿಸಲು ನೆರವಾಗಲಿದೆ ಎಂದು ಯದುವೀರ್ ಅಭಿಪ್ರಾಯಪಟ್ಟರು.
ಮನವಿಗಳಿಗೆ ಸಕಾರಾತ್ಮಕ ಸ್ಪಂದನೆ ನೀಡಿದ ಕೇಂದ್ರ ಸಚಿವ ಭೂಪೇಂದ್ರ ಯಾದವ್, ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಜನರ ಸುರಕ್ಷತೆ ಮತ್ತು ಪರಿಸರ ಸಂರಕ್ಷಣೆಯನ್ನು ಸಮನ್ವಯಗೊಳಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಮುಂದುವರಿಸುವುದಾಗಿ ಯದುವೀರ್ ಒಡೆಯರ್ ತಿಳಿಸಿದ್ದಾರೆ.



