Wednesday, October 15, 2025
Google search engine

Homeರಾಜ್ಯಸುದ್ದಿಜಾಲಆಟೋ ನಿಲ್ದಾಣ ನಿರ್ಮಿಸಲು ಅನುಮತಿ : ಉದ್ಘಾಟನೆ ಮಾಡುವ ಮುನ್ನಾ ದಿನ ಆದೇಶ ರದ್ದು

ಆಟೋ ನಿಲ್ದಾಣ ನಿರ್ಮಿಸಲು ಅನುಮತಿ : ಉದ್ಘಾಟನೆ ಮಾಡುವ ಮುನ್ನಾ ದಿನ ಆದೇಶ ರದ್ದು

ವಿನಯ್ ದೊಡ್ಡಕೊಪ್ಪಲು

ಹೊಸೂರು : ಆಟೋ ನಿಲ್ದಾಣ ನಿರ್ಮಿಸಲು ಅನುಮತಿ ಕೊಟ್ಟ ಇಲಾಖೆ ಕಾಮಗಾರಿ ಮುಗಿದು ಉದ್ಘಾಟನೆ ಮಾಡುವ ಮುನ್ನಾದಿನ ಆದೇಶ ರದ್ದುಗೊಳಿಸಿದ ವಿಲಕ್ಷಣ ಪ್ರಕರಣ ಸಾಲಿಗ್ರಾಮ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ವಿನಾಯಕ ಆಟೋ ಸವಾರರು ಮತ್ತು ಮಾಲೀಕರ ಸಂಘ ವತಿಯಿಂದ ಆಟೋ ನಿಲ್ದಾಣ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ವತಿಯಿಂದ ಅನುಮತಿಯನ್ನು ಪಡೆಯಲಾಗಿತ್ತು. ಅದರಂತೆ ವಿವಿಧ ದಾನಿಗಳ ಸಹಾಯದಿಂದ ಇದೀಗ ಆಟೋ ನಿಲ್ದಾಣ ಸಿದ್ಧಗೊಂಡಿದ್ದು ಬುಧವಾರ ಉದ್ಘಾಟನೆಯಾಗಬೇಕಿತ್ತು. ಆದರೆ ಸೋಮವಾರ ರಾತ್ರಿ ಏಕಾಏಕಿ ನಮ್ಮ ರಸ್ತೆಯ ಚರಂಡಿಯ ಮೇಲೆ ನಿಲ್ದಾಣ ನಿರ್ಮಿಸಲಾಗಿದೆ ತೆರವುಗೊಳಿಸಬೇಕು ಎಂದು ಲೋಕೋಪಯೋಗಿ ಇಲಾಖೆ ನೋಟಿಸ್ ನೀಡಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.

ಆಟೋ ಸಂಘದವರು 11-8-2025 ರಂದು ಅನುಮತಿ ಕೇಳಿ ಆದೇಶ ಪಡೆದು ಈಗಾಗಲೇ ನಿಲ್ದಾಣ ನಿರ್ಮಿಸಿದ್ದು 22-9-2025 ರಂದೇ ನಿಲ್ದಾಣ ನಿರ್ಮಾಣವನ್ನು ಸ್ಥಗಿತಗೊಳಿಸಿ ಎಂದು ನೋಟಿಸ್ ಜಾರಿಯಾಗಿದ್ದರೂ ಸೋಮವಾರ ರಾತ್ರಿ ಈ ಮಾಹಿತಿ ಆಟೋ ಸಂಘದವರಿಗೆ ತಿಳಿಯಿತು. ನೋಟಿಸ್ ನೀಡಿರುವ ಕ್ರಮವೇ ಸರಿ ಇಲ್ಲ. ಅದಲ್ಲದೆ ಒಂದು ತಿಂಗಳು 10 ದಿವಸದ ನಂತರ ಕಾಮಗಾರಿ ಮುಗಿದು ಉದ್ಘಾಟನೆ ದಿನ ನಿಗದಿಯಾದ ಮೇಲೆ ನೋಟಿಸ್ ಜಾರಿ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಿದ್ದು ನಿಲ್ದಾಣ ನಿರ್ಮಿಸಲು ಅನುಮತಿ ನೀಡಿದ ನಂತರ ನಿಲ್ದಾಣ ಚರಂಡಿ ಮೇಲಿದೆಯೇ ಇಲ್ಲವೇ ಎಂಬುದನ್ನು ಪರಿಶೀಲನೆ ಮಾಡಬೇಕಾದ ಅಧಿಕಾರಿಗಳು ಲಕ್ಷಾಂತರ ರೂ. ಗಳನ್ನು ಖರ್ಚು ಮಾಡಿ ನಿರ್ಮಿಸಿದ ನಂತರ ಈ ರೀತಿ ವರ್ತಿಸುವುದು ತುಘಲಕ್ ದರ್ಬಾರ್ ಆಗಿದೆ ಎಂದು ಸಂಘದ ಅಧ್ಯಕ್ಷ ದೂರಿದರು.

ಲೋಕೋಪಯೋಗಿ ಇಲಾಖೆ ಅನುಮತಿ ನೀಡಿರುವ ಪತ್ರದಲ್ಲಿ ಚಾಲಕರ ಹಿತ ದೃಷ್ಟಿಯಿಂದ ಅನುಮತಿ ನೀಡಿದೆ ಎಂದು ಹೇಳಿದ್ದು ಇದೀಗ ಸ್ಥಳ ತೆರವು ಗೊಳಿಸುವುದಾಗಿ ಹೇಳುತ್ತಿರುವುದರ ಹಿಂದೆ ಅನ್ಯ ಕಾರಣಗಳಿವೆ. ತಾಲೂಕಿನ ಬೇರೆ ಬೇರೆ ಗ್ರಾಮಗಳಲ್ಲೂ ರಸ್ತೆ ಬದಿಯಲ್ಲಿಯೇ ಆಟೋ ನಿಲ್ದಾಣ ನಿರ್ಮಾಣವಾಗಿದ್ದರೂ ಹೊಸೂರಿನಲ್ಲಿ ಮಾತ್ರ ತೆರವುಗೊಳಿಸಲು ಏಕಾಏಕಿ ಮುಂದಾಗುತ್ತಿರುವ ಧಾವಂತಕ್ಕೆ ಕಾರಣವೇನು ಎಂದು ಆರೋಪಿಸಿದ್ದಾರೆ.

ರಾಜಕೀಯ ಕಾರಣ
ಆಟೋ ನಿಲ್ದಾಣ ಕಾಮಗಾರಿಗೆ ಹಣಕಾಸಿನ ನೆರವನ್ನು ಜೆಡಿಎಸ್ ಮುಖಂಡ ಹಳಿಯೂರು ಮಧುಚಂದ್ರ ನಿರ್ವಹಿಸಿದ್ದು ಸದ್ಯ ನಿಲ್ದಾಣದ ಉದ್ಘಾಟನೆ ಬುಧವಾರ(ಇಂದು) ನಿಗದಿಯಾಗಿದ್ದು ಬ್ಯಾನರ್ಗಳು ಸಿದ್ದಗೊಂಡಿವೆ. ಅಲ್ಲದೆ ನಿಲ್ದಾಣದಲ್ಲಿ ಮಾಜಿ ಸಚಿವ ಸಾ.ರಾ. ಮಹೇಶ್ ಭಾವಚಿತ್ರವಿರುವ ಕಟೌಟ್ ಇದ್ದು ಅನ್ಯ ಪಕ್ಷದವರು ಇದರಿಂದ ಬೇಸರಗೊಂಡು ಅಧಿಕಾರಿಗಳ ಮೇಲೆ ಒತ್ತಡ ತಂದು ಬ್ಯಾನರ್ ತೆರವುಗೊಳಿಸಿದರೆ ನಿಲ್ದಾಣ ಉದ್ಘಾಟನೆಗೆ ಯಾವುದೇ ತೊಂದರೆ ಇಲ್ಲ ಎಂದು ಮೌಖಿಕವಾಗಿ ಕೆಲವು ಅಧಿಕಾರಿಗಳು ತಿಳಿಸಿರುವುದು ಜೆಡಿಎಸ್ ಮುಖಂಡರನ್ನು ರೊಚ್ಚಿಗೆಬ್ಬಿಸಿದೆ.

ಒಟ್ಟಾರೆ ರಾಜಕೀಯವೋ, ಅಧಿಕಾರಿಗಳ ಹೊಣೆಗೇಡಿತನವೋ ಒಂದು ಬಾರಿ ಅನುಮತಿ ನೀಡಿ ಉದ್ಘಾಟನೆಯಾಗುವ ಹಿಂದಿನ ದಿನ ಬೇಡ ಎನ್ನುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಿ ತಮಗೆ ತಮ್ಮ ಆಟೋಗಳಿಗೆ ವ್ಯವಸ್ಥಿತವಾಗಿ ನಿಲ್ದಾಣ ನಿರ್ಮಾಣ ಮಾಡಿಕೊಂಡಿದ್ದ ಆಟೋ ಚಾಲಕರಿಗೆ ಮತ್ತು ಮಾಲೀಕರಿಗೆ ಈ ರಗಳೆಯಿಂದ ಸಾಕಷ್ಟು ಬೇಸರವಾಗಿದೆ. ಇಂದು ಉದ್ಘಾಟನೆ ನಡೆಯುವುದೋ ಇಲ್ಲವೋ ಎಂಬ ಜಿಜ್ಞಾಸೆಯಲ್ಲಿದ್ದಾರೆ.

ಆಟೋ ನಿಲ್ದಾಣ ಕಾಮಗಾರಿ ಯಾರೇ ಮಾಡಿರಲಿ ಸಾರ್ವಜನಿಕ ಉಪಯೋಗಕ್ಕೆ ಬಳಸುವ ಆಟೋಗಳಿಂದ ಈ ಭಾಗದ ಸಾವಿರಾರು ಜನರಿಗೆ ಅನುಕೂಲವಾಗಿದ್ದು ಅಂತಹ ಆಟೋ ನಿಲ್ದಾಣಕ್ಕೆ ತಡೆಗಟ್ಟುತ್ತಿರುವುದು ಎಷ್ಟು ಸರಿ? ಇದು ಕ್ಷೇತ್ರದಲ್ಲಿ ರಾಜಕೀಯ ಹೋರಾಟಕ್ಕೆ ಮುನ್ನುಡಿಯಾಗಲಿದ್ದು ಇಂದು ಉದ್ಘಾಟನೆ ನೂರಕ್ಕೆ ನೂರರಷ್ಟು ನಡೆಯಲಿದೆ. ಮಾಜಿ ಸಚಿವ ಸಾ.ರಾ. ಮಹೇಶ್ ವಿಧಾನ ಪರಿಷತ್ ಸದಸ್ಯ ಮಂಜೇಗೌಡ ಉದ್ಘಾಟನೆ ನೆರವೇರಿಸಲಿದ್ದಾರೆ.

ಹಳಿಯೂರು ಮಧುಚಂದ್ರ,ಜಿಲ್ಲಾ ಜೆಡಿಎಸ್ ಮುಖಂಡ

ನಾವು ಎಲ್ಲಾ ಪಕ್ಷದವರನ್ನು ಹಣಕಾಸು ನೆರವು ಕೇಳಿದ್ದು ಆದರೆ ಮಧುಚಂದ್ರ ಅವರು ಸಂಪೂರ್ಣ ನಿಲ್ದಾಣ ಕಾಮಗಾರಿಯ ಹೊಣೆ ಹೊತ್ತು ಕಾಮಗಾರಿ ಉದ್ಘಾಟನೆಗೆ ಸಿದ್ಧಗೊಂಡಿದೆ. ಇದೀಗ ಉದ್ಘಾಟನೆಗೆ ನೆರವು ನೀಡಿದ ದಾನಿಗಳ ಫೋಟೋ ಬಳಸಿದ್ದನ್ನು ನೆಪವಾಗಿಸಿಕೊಂಡು ಉದ್ಘಾಟನೆ ತಡೆಯುವುದು ಎಷ್ಟು ಸರಿ ಆಟೋ ಚಾಲಕರಲ್ಲಿ ಎಲ್ಲಾ ಪಕ್ಷದ ಕಾರ್ಯಕರ್ತರು ಇದ್ದು ಈ ಘಟನೆಯಿಂದ ನಮಗೆ ನೋವಾಗಿದೆ, ಆದರೆ ಇಂದು ಉದ್ಘಾಟನೆಯಾಗುವುದು ಶತಸಿದ್ಧ.

ಮಂಜು,ಅಧ್ಯಕ್ಷರು ವಿನಾಯಕ ಆಟೋ ಚಾಲಕರು ಮತ್ತು ಮಾಲೀಕರ ಸಂಘ. ಹೊಸೂರು.

ಆಟೋ ನಿಲ್ದಾಣ ನಿರ್ಮಾಣವಾಗಿರುವುದು ನಮ್ಮ ರಸ್ತೆಯ ಚರಂಡಿಯ ಮೇಲಾಗಿದ್ದು ಅದನ್ನು ತೆರವುಗೊಳಿಸಲೇಬೇಕು ಈ ಬಗ್ಗೆ ಯಾವುದೇ ರಾಜಿ ಇಲ್ಲ.

ಸುಮಿತ ಬಸವರಾಜು,ಎ ಇ ಇ ಲೋಕೋಪಯೋಗಿ ಇಲಾಖೆ, ಕೆ ಆರ್ ನಗರ.




RELATED ARTICLES
- Advertisment -
Google search engine

Most Popular