ಗುಂಡ್ಲುಪೇಟೆ: ಹದಿಹರೆಯದ ಮಕ್ಕಳಲ್ಲಿ ವೈಯಕ್ತಿಕ ಸ್ವಚ್ಛತೆಯ ಅರಿವು ಅಗತ್ಯ. ಇದರಿಂದ ಕಲಿಕೆ ಹಾದಿ ಸುಗಮವಾಗುತ್ತದೆ ಎಂದು ಜಿಟಿಟಿಸಿ ಕಾಲೇಜು ಪ್ರಾಂಶುಪಾಲ ಅನಿಲ್ ಕುಮಾರ್ ತಿಳಿಸಿದರು.
ಪಟ್ಟಣದ ಸರ್ಕಾರಿ ಉಪಕರಣ ತಾಂತ್ರಿಕ ತರಬೇತಿ ಸಂಸ್ಥೆಯಲ್ಲಿ ತಾಲೂಕು ಸ್ತ್ರೀ ಶಕ್ತಿ ಮಹಿಳಾ ಒಕ್ಕೂಟ ಬ್ಲ್ಯಾಕ್ ಸೊಸೈಟಿ
ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹದಿಹರೆಯದ ಮಕ್ಕಳಿಗೆ ಆರೋಗ್ಯ ಶಿಕ್ಷಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವೈಯಕ್ತಿಕ ಸ್ವಚ್ಛತೆಯಿಂದ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದರು.
ಬಹುಮುಖ್ಯವಾಗಿ ದಿನನಿತ್ಯ ಕುಡಿಯುವ ನೀರು, ಬಳಸುವ ತಟ್ಟೆ, ಲೋಟ ಸ್ವಚ್ಛವಾಗಿರಬೇಕು. ಊಟ ಮತ್ತು ಬಹಿರ್ದೆಸೆಯ ನಂತರ ಕೈ ತೊಳೆಯಬೇಕು. ಸ್ವಚ್ಛತೆಯಿಂದ ಮಾತ್ರ ಆರೋಗ್ಯ ಸಾಧ್ಯ. ಶಾಲೆಯ ಜೊತೆಗೆ ಮನೆಯಲ್ಲೂ ಊಟಕ್ಕೆ ಮುನ್ನ ಕೈ ತೊಳೆಯುವ ಅಭ್ಯಾಸ ರೂಢಿಸಿಕೊಳ್ಳಿ. ಇದೇ ಆರೋಗ್ಯದ ಗುಟ್ಟು ಎಂದು ಸಲಹೆ ನೀಡಿದರು.
ಸಾಹಿತಿ ಕಾಳಿಂಗಸ್ವಾಮಿ ಸಿದ್ದಾರ್ಥ್ ಮಾತನಾಡಿ, ಸಮಾಜದಲ್ಲಿ ಮಕ್ಕಳಿಗೆ ಸಮಾನ ಹಕ್ಕು ಸಿಗಬೇಕು ಯಾವುದೇ ದುಶ್ಚಟಗಳಿಗೆ ಬಲಿಯಾಗಬಾರದು ಮತ್ತು ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟು ಓದುವ ಕಡೆ ಗಮನ ಕೊಡಬೇಕು. ವರ್ಷಗಳು ಕಳೆಯುತ್ತಿದ್ದಂತೆ ಮಕ್ಕಳ ದೈಹಿಕತೆಯಲ್ಲಿ ಬದಲಾವಣೆಯಾಗುತ್ತದೆ. ಹಾರ್ಮೊನ್ ನಲ್ಲಿ ವ್ಯತ್ಯಾಸವಾಗುತ್ತದೆ. ಮನಸ್ಸಿನ ಭಾವನೆಗಳಲ್ಲಿ ಸಹ ಏರುಪೇರು, ಬದಲಾವಣೆಗಳು ಆಗುತ್ತಿರುತ್ತದೆ. ಪ್ರೌಢವಸ್ಥೆ ಮಕ್ಕಳು ಬಾಲ್ಯಜೀವನದಿಂದ ಯುವ ವಯಸ್ಕ ಜೀವನಕ್ಕೆ ಕಾಲಿಟ್ಟರೆಂದು ಅರ್ಥ. ಆಗ ಮಕ್ಕಳು ಮಾನಸಿಕವಾಗಿ ಯೋಚಿಸುವ ರೀತಿ ಬದಲಾಗುತ್ತದೆ. ಮಕ್ಕಳು ಪ್ರೌಢಾವಸ್ಥೆಗೆ ಬಂದಾಗ ಪೆÇೀಷಕರಲ್ಲಿ ಮತ್ತು ಮನೆಯ ವಾತಾವರಣ ಕೂಡ ಬದಲಾಗುತ್ತದೆ ಎಂದರು.
ಹೆಣ್ಣು ಮಕ್ಕಳಲ್ಲಿ ದೈಹಿಕ ಬದಲಾವಣೆ 7ರಿಂದ 13 ವರ್ಷದೊಳಗೆ ಮತ್ತು ಗಂಡು ಮಕ್ಕಳಲ್ಲಿ 9ರಿಂದ 14 ವರ್ಷದೊಳಗೆ ಆಗುತ್ತದೆ. ಮುಖದಲ್ಲಿ ಕೂದಲು ಬರುವುದು, ಹೆಚ್ಚು ಬೆವರುವುದು, ತೈಲ ಸ್ರವಿಸುವಿಕೆ, ಸಂತಾನೋತ್ಪತ್ತಿ ಅಂಗಗಳ ಬೆಳವಣಿಗೆ, ಧ್ವನಿ ಬದಲಾವಣೆ ಮತ್ತು ದೇಹದ ಭಾಗಗಳ ಬೆಳವಣಿಗೆ ಕೆಲವು ಚಿಹ್ನೆಗಳು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಮಹಿಳಾ ಒಕ್ಕೂಟ ಅಧ್ಯಕ್ಷರಾದ ದಾಕ್ಷಾಯಣಮ್ಮ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊರೆಸ್ವಾಮಿ ನಾಯಕ್, ಸಂಯೋಜಕರಾದ ಎಂ.ಗುರುಮಲ್ಲಮ್ಮ ಸೇರಿದಂತೆ ಇತರರು ಹಾಜರಿದ್ದರು.