ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ ಮುಂದುವರಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಇಂದು ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ರಾಮಚಂದ್ರ ಹುದ್ದಾರ್ ಅವರ ವಿಭಾಗೀಯ ಪೀಠವು, ನೀತಿಯ ವಿಚಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಬೆಂಗಳೂರಿನ ಗಿರೀಶ್ ಭಾರದ್ವಾಜ್ ಹಾಗೂ ಆರ್ ಆನಂದ ಮೂರ್ತಿ ಸಲ್ಲಿಸಿದ್ದ ಪಿಐಎಲ್ ವಜಾಗೊಳಿಸಿದೆ.
ಕೇಂದ್ರ ಸರಕಾರ ಜಾರಿಗೊಳಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೈಬಿಟ್ಟು ರಾಜ್ಯ ಶಿಕ್ಷಣ ನೀತಿ ಜಾರಿ ಮಾಡುತ್ತಿರುವ ರಾಜ್ಯದ ಕ್ರಮ ಪ್ರಶ್ನಿಸಿ ಕಳೆದ ವರ್ಷ ಕರ್ನಾಟಕ ಹೈಕೋರ್ಟ್‌ಗೆ ಪಿಎಲ್‌ಐ ಸಲ್ಲಿಕೆಯಾಗಿತ್ತು. ಈ ಅರ್ಜಿ ಸಂಬಂಧ ವಿಚಾರಣೆ ನಡೆಸಿದ ಹೈಕೋರ್ಟ್ ರಾಜ್ಯ ಸರಕಾರಕ್ಕೆ 2024 ರ ಜುಲೈನಲ್ಲಿ ನೋಟಿಸ್ ಜಾರಿಗೊಳಿಸಿತ್ತು.
ಅರ್ಜಿಯಲ್ಲಿ ಏನಿತ್ತು..?: ಭಾರತದಲ್ಲಿ ಶಿಕ್ಷಣ ವಿವಿಧ ಹಂತ ಹಾಗೂ ಪ್ರಕಾರಗಳನ್ನು ಒಳಗೊಂಡಿದೆ. ಉದಾಹರಣೆಗೆ ಬಾಲ್ಯ, ಪ್ರಾಥಮಿಕ, ಮಾಧ್ಯಮಿಕ, ಪ್ರೌಢ, ಉನ್ನತ ಮತ್ತು ವೃತ್ತಿಪರ ಶಿಕ್ಷಣ ಇತ್ಯಾದಿ. ವಿದ್ಯಾರ್ಥಿಗಳಿಗೆ ಸಮನಾಗಿ ಶಿಕ್ಷಣ ಒದಗಿಸಲು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ. ಶಿಕ್ಷಣ ಸಂಸ್ಥೆಗಳಿಗೆ ಒಂದೇ ತೆರನಾದ ಚೌಕಟ್ಟು ಮತ್ತು ಮಾರ್ಗಸೂಚಿ ಒದಗಿಸುವುದು ಇದರ ಮುಖ್ಯ ಉದ್ದೇಶ. ಕೇಂದ್ರ ಸರಕಾರದ ಆದೇಶದ ಮೇರೆಗೆ 2020ರಲ್ಲಿ ಹೊಸ ಮತ್ತು ಪರಿಸ್ಕೃತ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದಿದೆ.
ಸರಕಾರದ ಆದೇಶದನ್ವಯ 2021ರ ಆ. 7ರಂದು ರಾಜ್ಯ ವ್ಯಾಪ್ತಿ ಜಾರಿಗೆ ಬಂತು. 2023ರಲ್ಲಿ ಸರಕಾರ ಬದಲಾವಣೆಯಾದ ಬಳಿಕ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನ ಹಿಂಪಡೆಯಲು ನಿರ್ಧರಿಸಿ, ತನ್ನದೇ ಆದ ರಾಜ್ಯ ಶಿಕ್ಷಣ ನೀತಿ ರೂಪಿಸಲು ತೀರ್ಮಾನಿಸಿದೆ. ಅದಕ್ಕಾಗಿ ಸಮಿತಿ ರಚಿಸಿರುವುದಾಗಿ 2023ರ ಅಕ್ಟೋಬರ್ 11 ರಂದು ಹೊರಡಿಸಿರುವ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸೂಕ್ತ ಕಾರಣವಿಲ್ಲದೆ ಹಿಂಪಡೆದಿರುವುದರಿಂದ ವಿಶ್ವವಿದ್ಯಾಲಯಗಳು, ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿಗಳು, ಪೋಷಕರಲ್ಲಿ ಗೊಂದಲ ಉಂಟು ಮಾಡಿದೆ. ಜತೆಗೆ ಇದರಿಂದ ವಿದ್ಯಾರ್ಥಿಗಳು ಸಮಗ್ರ ನೀತಿಯಿಂದ ವಂಚಿತರಾಗುತ್ತಿದ್ದಾರೆ. ಹಾಗಾಗಿ, ರಾಜ್ಯ ಶಿಕ್ಷಣ ನೀತಿ ಕೈಬಿಟ್ಟು ರಾಷ್ಟ್ರ ಶಿಕ್ಷಣ ನೀತಿ ಅನುಸರಿಸುವಂತೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಈ ಹಿಂದೆ ಸುಪ್ರೀಂ ಕೋರ್ಟ್ ಹೇಳಿದ್ದೇನು..?: ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಕೇರಳಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನವನ್ನು ಕೋರಿದ್ದ ಅರ್ಜಿಯನ್ನು ಮೇ 9 ರಂದು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ಅಲ್ಲದೇ ಅದನ್ನು ಅಳವಡಿಸಿಕೊಳ್ಳುವಂತೆ ಯಾವುದೇ ರಾಜ್ಯವನ್ನು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಹೇಳಿತು. ನೀತಿಯ ಅನುಷ್ಠಾನದಿಂದ ಮೂಲಭೂತ ಹಕ್ಕುಗಳ ಉಲ್ಲಂಘನೆಯನ್ನು ಮಾತ್ರ ನ್ಯಾಯಾಲಯವು ಪರಿಗಣಿಸಬಹುದಾಗಿದೆ ಎಂದು ನ್ಯಾಯಮೂರ್ತಿಗಳಾದ ಜೆ.ಬಿ.ಪರ್ಡಿವಾಲಾ ಮತ್ತು ಆರ್.ಮಹಾದೇವನ್ ಅವರ ಪೀಠವು ತಿಳಿಸಿತು.